ಮೌಂಟ್‌ ಮಾಂಗನ್ಯುಯಿ(ಫೆ.11): ಕೆ.ಎಲ್ ರಾಹುಲ್(112) ಆಕರ್ಷಕ ಶತಕ ಹಾಗೂ ಶ್ರೇಯಸ್ ಅಯ್ಯರ್(62) ಸಮಯೋಚಿತ ಅರ್ಧಶತಕದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 296 ರನ್ ಬಾರಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಮತ್ತೊಮ್ಮೆ ವಿಫಲವಾಯಿತು. ಎರಡನೇ ಓವರ್‌ನಲ್ಲೇ ಟೀಂ ಇಂಡಿಯಾ ಮಯಾಂಕ್ ಅಗರ್‌ವಾಲ್ ವಿಕೆಟ್ ಕಳೆದುಕೊಂಡಿತು.  ಇದಾದ ಸ್ವಲ್ಪ ಹೊತ್ತಿನಲ್ಲೇ ನಾಯಕ ವಿರಾಟ್ ಕೊಹ್ಲಿ(9) ಕೂಡಾ ವಿಕೆಟ್ ಒಪ್ಪಿಸಿದಾಗ ಮತ್ತೊಮ್ಮೆ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಅನುಭವಿಸಿತು. ಇನ್ನು ಉತ್ತಮವಾಗಿ ಆಡುತ್ತಿದ್ದ ಪೃಥ್ವಿ ಶಾ(40) ಇಲ್ಲದ ಎರಡನೇ ರನ್ ಕದಿಯಲು ಹೋಗಿ ರನೌಟ್ ಆದರು.  ಈ ವೇಳೆ ಭಾರತ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು.

3ನೇ ಏಕದಿನ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಆಸರೆಯಾದ ಶ್ರೇಯಸ್-ರಾಹುಲ್:  ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ಆಸರೆಯಾದರು. ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತುವಲ್ಲಿ ಈ ಜೋಡಿ ಯಶಸ್ವಿಯಾಯಿತು. ಮೊದಲಿಗೆ ಎಚ್ಚರಿಕೆಯ ಆಟವಾಡಿದ ಅಯ್ಯರ್-ರಾಹುಲ್ ಜೋಡಿ ಸಿಕ್ಕ ಅವಕಾಶದಲ್ಲಿ ಬೌಂಡರಿ ಬಾರಿಸಲು ಆರಂಭಿಸಿದರು. 4ನೇ ವಿಕೆಟ್‌ಗೆ ಈ ಜೋಡಿ ಶತಕದ ಜತೆಯಾಟ ನಿಭಾಯಿಸಿತು. ಅಯ್ಯರ್ 63 ಎಸೆತಗಳಲ್ಲಿ 9 ಬೌಂಡರಿ ಸಹಿತ 62 ರನ್ ಗಳಿಸಿ ನೀಶಮ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಶತಕದ ಜತೆಯಾಟಕ್ಕೆ ತೆರೆಬಿದ್ದಿತು.

ಮೈದಾನದಲ್ಲಿ ಕನ್ನಡಿಗರ ಕಲರವ: ಟೀಂ ಇಂಡಿಯಾದ ನಾಲ್ಕನೇ ವಿಕೆಟ್ ಪತನದ ಬಳಿಕ ರಾಹುಲ್ ಕೂಡಿಕೊಂಡ ಮನೀಶ್ ಪಾಂಡೆ ಅದ್ಭುತ ಜತೆಯಾಟ ನಿಭಾಯಿಸಿದರು. ಕನ್ನಡದಲ್ಲೇ ಮಾತನಾಡುತ್ತಾ ಒಂದು-ಎರಡು ರನ್ ಹೆಕ್ಕುತ್ತಾ ಸಾಗಿದ ಕರ್ನಾಟಕದ ಜೋಡಿ ನಿದಾನವಾಗಿಯೇ ರನ್‌ಗತಿಗೆ ಚುರುಕು ಮುಟ್ಟಿಸಿದರು. 5ನೇ ವಿಕೆಟ್‌ಗೆ ಈ ಜೋಡಿ 107 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು 260ರ ಗಡಿ ದಾಟಿಸಿದರು. ಕೆ.ಎಲ್. ರಾಹುಲ್ 113 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 112 ರನ್ ಬಾರಿಸಿದರು. ಇದು ಕೆ.ಎಲ್. ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ 4ನೇ ಶತಕವಾಗಿದೆ. ಇದರ ಜತೆಗೆ ಭಾರತ ಪರ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 4 ಶತಕ ಬಾರಿಸಿದ ಎರಡನೇ ಕ್ರಿಕೆಟಿಗ ಎನ್ನುವ ಗೌರವಕ್ಕೂ ರಾಹುಲ್ ಪಾತ್ರರಾದರು. 31 ಇನಿಂಗ್ಸ್‌ಗಳಲ್ಲಿ ರಾಹುಲ್ 4 ಶತಕ ಬಾರಿಸಿದರು. ಇನ್ನು ಧವನ್ 24 ಇನಿಂಗ್ಸ್‌ನಲ್ಲಿ 4 ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ರಾಹುಲ್‌ಗೆ ಉತ್ತಮ ಸಾಥ್ ನೀಡಿದ ಮನೀಶ್ ಪಾಂಡೆ 48 ಎಸೆತಗಳಲ್ಲಿ 42 ರನ್ ಬಾರಿಸಿದರು.

ಮತ್ತೆ ದಿಢೀರ್ ಕುಸಿತ: ಒಂದು ಹಂತದಲ್ಲಿ 46 ಓವರ್‌ವರೆಗೂ ಕೇವಲ 4 ವಿಕೆಟ್ ಕಳೆದುಕೊಂಡು 260+ ರನ್ ಬಾರಿಸಿದ್ದ ಭಾರತ 47ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ರಾಹುಲ್ ಮತ್ತು ಮನೀಶ್ ಪಾಂಡೆ ವಿಕೆಟ್ ಕಳೆದುಕೊಂಡಿತು. ಹೀಗಾಗಿ 300+ ರನ್ ಬಾರಿಸುವ ಭಾರತದ ಕನಸು ಭಗ್ನವಾಯಿತು. ಶಾರ್ದೂಲ್ ಠಾಕೂರ್ ಸಹಾ (7) ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಕೊನೆಯಲ್ಲಿ ಟೀಂ ಇಂಡಿಯಾ ನಿರೀಕ್ಷಿಸಿದಷ್ಟು ರನ್ ದಾಖಲಾಗಲಿಲ್ಲ.

ಬೆನ್ನೆಟ್‌ಗೆ 4 ವಿಕೆಟ್: ನ್ಯೂಜಿಲೆಂಡ್ ಪರ ಹ್ಯಾಮಿಸ್ ಬೆನ್ನೆಟ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ಅದರಲ್ಲೂ ಕೊಹ್ಲಿ, ರಾಹುಲ್ ಹಾಗೂ ಪಾಂಡೆ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಕೈಲ್ ಜಾಮಿಸನ್ ಹಾಗೂ ಜೇಮ್ಸ್ ನೀಶಮ್ ತಲಾ ಒಂದೊಂದು ವಿಕೆಟ್ ಪಡೆದರು.