ಸಿಡ್ನಿ[ಜ.06]: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್‌ ಟಾಮ್ ಬಾಂಟನ್ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 

ಸಿಡ್ನಿಯಲ್ಲಿ [ಜನವರಿ 06] ನಡೆದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬಾಂಟನ್ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಮಿಲಿಯನ್ ಡಾಲರ್ ಬೇಬಿ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಬಾಂಟನ್ ಆಟ ಇದೀಗ ಕುತೂಹಲ ಹುಟ್ಟುಹಾಕಿದೆ.

IPL ಟೂರ್ನಿಗೂ ಮುನ್ನವೇ ಅಬ್ಬರಿಸಿದ ಹೊಸ RCB ಕ್ರಿಕೆಟಿಗ..!

21 ವರ್ಷದ ಇಂಗ್ಲೆಂಡ್ ಬ್ಯಾಟ್ಸ್’ಮನ್ ಟಾಮ್ ಬಾಂಟನ್ ಅವರನ್ನು ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು 1 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಬಿಗ್ ಬ್ಯಾಶ್ ಲೀಗ್’ನಲ್ಲಿ ಬ್ರಿಸ್ಬೇನ್ ಹೀಟ್ ಪ್ರತಿನಿಧಿಸುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಾಂಟನ್, ಸಿಡ್ನಿ ಥಂಡರ್ಸ್ ವಿರುದ್ಧ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 56 ರನ್ ಚಚ್ಚಿದರು. 

ಆಫ್ ಸ್ಪಿನ್ನರ್ ಅರ್ಜುನ್ ನಾಯರ್ ಬೌಲಿಂಗ್ ಮೊದಲ ಎಸೆತ ಡಾಟ್ ಹಾಕಿದರು. ಆ ಬಳಿಕ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಇದರ ಜತೆಗೆ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದು ಬಿಬಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿವೇಗದ ಅರ್ಧಶತಕವಾಗಿದ್ದು, ಈ ಮೊದಲು ಕ್ರಿಸ್ ಗೇಲ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.