2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ ತಂಡವು ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ತಂಡವನ್ನು ಬಲಪಡಿಸುವ ಉದ್ದೇಶದಿಂದ ಪ್ರಮುಖ ಮೂವರು ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ.
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಲವೊಂದು ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರ್ಸಿಬಿ ತಂಡವು ಇದೀಗ ಕಪ್ ಗೆಲ್ಲಿಸಿಕೊಟ್ಟ ಬಹುತೇಕ ಆಟಗಾರರನ್ನು ಉಳಿಸಿಕೊಂಡು, ಈ ಮೂವರು ಆಟಗಾರರನ್ನು ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇಲ್ನೋಟಕ್ಕೆ ಸಾಕಷ್ಟು ಸೆಟಲ್ ಆಗಿರುವ ತಂಡದಂತೆ ಭಾಸವಾಗುತ್ತಿದ್ದು, ತಂಡದಲ್ಲಿ ಮೇಜರ್ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಆರ್ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದ್ದು, ಇದೀಗ ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಯಾವ ತಂಡವು ಇದುವರೆಗೂ ಐಪಿಎಲ್ನಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಅಂತಹದ್ದೊಂದು ಅಪರೂಪದ ದಾಖಲೆ ಮೇಲೆ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಆರ್ಸಿಬಿ ತಂಡವು ತನ್ನ ಕೋರ್ ಆಟಗಾರರನ್ನು ಉಳಿಸಿಕೊಂಡು, ಮಿನಿ ಹರಾನಿನಲ್ಲಿ ಪಾಲ್ಗೊಳ್ಳಲು ರೆಡಿಯಾಗಿದೆ. ಆರ್ಸಿಬಿ ತಂಡದಿಂದ ರಿಲೀಸ್ ಮಾಡಲು ಹೊರಟಿರುವ ಸಂಭಾವ್ಯ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
1. ಮಂಗೇಶ್ ಯಾದವ್:(₹5.20 ಕೋಟಿ)
ಭಾರತದ ಯುವ ವೇಗದ ಬೌಲರ್ ಮಂಗೇಶ್ ಯಾದವ್ ಅವರನ್ನು ಆರ್ಸಿಬಿ ಫ್ರಾಂಚೈಸಿಯು ಕಳೆದ ಐಪಿಎಲ್ ಮಿನಿ ಹರಾಜಿನಲ್ಲಿ ಬರೋಬ್ಬರಿ 5.20 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಯಶ್ ದಯಾಳ್ಗೆ ಪರ್ಯಾಯ ಬೌಲರ್ ಆಗಿ ಮಂಗೇಶ್ ಯಾದವ್ ಅವರನ್ನು ಆರ್ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮಂಗೇಶ್ ಯಾದವ್ ಆರ್ಸಿಬಿ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಹೀಗಾಗಿ ಮಿನಿ ಹರಾಜಿಗೂ ಮುನ್ನ ಮಂಗೇಶ್ ಯಾದವ್ ಅವರನ್ನು ತಂಡದಿಂದ ರಿಲೀಸ್ ಮಾಡಿ ತಂಡಕ್ಕೆ ಸೆಟ್ ಆಗುವಂತಹ ಬೌಲರ್ ಮೇಲೆ ಬೆಂಗಳೂರು ಫ್ರಾಂಚೈಸಿ ಬಂಡವಾಳ ಹಾಕುವ ಸಾಧ್ಯತೆಯಿದೆ. ಮಂಗೇಶ್ ಯಾದವ್ ಅವರನ್ನು ರಿಲೀಸ್ ಮಾಡಿದರೆ ಆರ್ಸಿಬಿ ಪರ್ಸ್ಗೆ 5.20 ಕೋಟಿ ರುಪಾಯಿ ಸೇರ್ಪಡೆಯಾಗಲಿದೆ.
2. ನುವಾನ್ ತುಷಾರ(₹1.60 ಕೋಟಿ)

ಇನ್ನು ಶ್ರೀಲಂಕಾ ಮೂಲದ ಮಾರಕ ವೇಗಿ ನುವಾನ್ ತುಷಾರ ಅವರನ್ನು ಆರ್ಸಿಬಿ ಫ್ರಾಂಚೈಸಿಯು 1.60 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ವಿದೇಶಿ ಆಟಗಾರರ ಸ್ಲಾಟ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಜವಾಬ್ದಾರಿ ಆರ್ಸಿಬಿ ಮುಂದಿದೆ. ಈಗಾಗಲೇ ವಿದೇಶಿ ಆಟಗಾರರಾಗಿ ಫಿಲ್ ಸಾಲ್ಟ್, ಜೇಕಬ್ ಡಫಿ, ಜೋಶ್ ಹೇಜಲ್ವುಡ್, ಟಿಮ್ ಡೇವಿಡ್, ಜೇಕಬ್ ಬೆಥೆಲ್ ಅವರಂತಹ ಆಟಗಾರರಿರುವುದರಿಂದ ತುಷಾರ ಅವರನ್ನು ತಂಡದಿಂದ ರಿಲೀಸ್ ಮಾಡಿ ಮತ್ತಷ್ಟು ಕ್ವಾಲಿಟಿ ಆಟಗಾರರನ್ನು ಆರ್ಸಿಬಿ ಖರೀದಿಸುವ ಸಾಧ್ಯತೆಯಿದೆ.
3. ಯಶ್ ದಯಾಳ್:(₹5 ಕೋಟಿ)

ಈ ಲಿಸ್ಟ್ನಲ್ಲಿರುವ ಮೂರನೇ ಹಾಗೂ ಅಚ್ಚರಿಯ ಹೆಸರೆಂದರೇ ಅದು ಎಡಗೈ ವೇಗಿ ಯಶ್ ದಯಾಳ್ ಅವರದ್ದು. ಯಶ್ ದಯಾಳ್ ವೈಯುಕ್ತಿಕ ಕಾರಣದಿಂದ ಕಳೆದ ಸೀಸನ್ ಐಪಿಎಲ್ ಆಡಿರಲಿಲ್ಲ. ಆದರೆ ಆರ್ಸಿಬಿ ತಂಡವು 2025ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗುವಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಆ ಸೀಸನ್ನಲ್ಲಿ ಯಶ್ ದಯಾಳ್ 15 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸಿದ್ದರು. ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವೇ ಉಳಿದಿರುವ ಯಶ್ ದಯಾಳ್ ಅವರನ್ನು ಆರ್ಸಿಬಿ ಫ್ರಾಂಚೈಸಿ ರಿಲೀಸ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಕಳೆದ ಸೀಸನ್ನಲ್ಲಿ ಆರ್ಸಿಬಿಗೆ ಯಶ್ ದಯಾಳ್ ಅನುಪಸ್ಥಿತಿ ಕಾಡಿರಲಿಲ್ಲ. ರಸಿಕ್ ಧಾರ್, ದಯಾಳ್ ಕೊರತೆ ಕಾಡದಂತೆ ನೋಡಿಕೊಂಡಿದ್ದರು.







