ಪಾಕ್ ಎದುರು ಪಂದ್ಯ ಗೆಲ್ಲಿಸಿ ಜೈ ಶ್ರೀ ಹನುಮಾನ್ ಎಂದ ಕೇಶವ್ ಮಹಾರಾಜ್..!
ತಂಡವನ್ನು ಗೆಲುವಿನ ದಡ ಸೇರಿಸಿದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಲುವಿನ ರನ್ ಬಾರಿಸಿದ ಫೋಟೋ ಜತೆಗೆ "ನಾನು ದೇವರನ್ನು ನಂಬುತ್ತೇನೆ. ನಮ್ಮ ಹುಡುಗರಿಂದ ಎಂತಹ ಒಳ್ಳೆಯ ಫಲಿತಾಂಶವಿದು. ತಬ್ರೀಜ್ ಶಮ್ಸಿ ಹಾಗೂ ಏಯ್ಡನ್ ಮಾರ್ಕ್‌ರಮ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಜೈ ಶ್ರೀ ಹನುಮಾನ್" ಎಂದು ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ.

ಚೆನ್ನೈ(ಅ.28): ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹಾರಾಜ್, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಒಂದು ವಿಕೆಟ್ ರೋಚಕ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿತ್ತು.
ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 271 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಇನ್ನೂ 16 ಎಸೆತ ಬಾಕಿ ಇರುವಂತೆಯೇ ಒಂದು ವಿಕೆಟ್ ವಿರೋಚಿತ ಗೆಲುವು ಸಾಧಿಸಿತು. ಕೊನೆಯ ವಿಕೆಟ್‌ಗೆ ತಬ್ರೀಜ್ ಶಮ್ಸಿ ಜತೆ ಮುರಿಯದ 11 ರನ್ ಜತೆಯಾಟವಾಡಿದ ಕೇಶವ್ ಮಹರಾಜ್, ಭರ್ಜರಿ ಬೌಂಡರಿ ಬಾರಿಸಿ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.
ತಂಡವನ್ನು ಗೆಲುವಿನ ದಡ ಸೇರಿಸಿದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಲುವಿನ ರನ್ ಬಾರಿಸಿದ ಫೋಟೋ ಜತೆಗೆ "ನಾನು ದೇವರನ್ನು ನಂಬುತ್ತೇನೆ. ನಮ್ಮ ಹುಡುಗರಿಂದ ಎಂತಹ ಒಳ್ಳೆಯ ಫಲಿತಾಂಶವಿದು. ತಬ್ರೀಜ್ ಶಮ್ಸಿ ಹಾಗೂ ಏಯ್ಡನ್ ಮಾರ್ಕ್‌ರಮ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಜೈ ಶ್ರೀ ಹನುಮಾನ್" ಎಂದು ಕೇಶವ್ ಮಹಾರಾಜ್ ಬರೆದುಕೊಂಡಿದ್ದಾರೆ.
ಅಪಾರ ದೈವಭಕ್ತರಾಗಿರುವ ದಕ್ಷಿಣ ಆಫ್ರಿಕಾದ ಸ್ಪಿನ್ ಆಲ್ರೌಂಡರ್ ಕೇಶವ್ ಮಹಾರಾಜ್, ವಿಶ್ವಕಪ್ ಆಡಲು ಭಾರತಕ್ಕೆ ಬಂದ ಆರಂಭದಲ್ಲೇ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ಇನ್ನು ಹಿಂದೂ ಧರ್ಮದ ಮೇಲೆ ಅಪಾರ ಶ್ರದ್ದೆ ಹೊಂದಿರುವ ಕೇಶವ್ ಮಹಾರಾಜ್ ಅವರ ಬ್ಯಾಟ್‌ನಲ್ಲಿ 'ಓಂ' ಎನ್ನುವ ಸಿಂಬಲ್ ಇದೆ.
ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಒಂದು ಹಂತದಲ್ಲಿ 206 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಒಳಗಾಗಿತ್ತು. ಆದರೆ ಏಯ್ಡನ್ ಮಾರ್ಕ್‌ರಮ್ ಆಕರ್ಷಕ 91 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಗೆಲುವಿನೊಂದಿಗೆ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಆಡಿದ 6 ಪಂದ್ಯಗಳ ಪೈಕಿ 5 ಗೆಲುವಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನೊಂದೆಡೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಸೆಮೀಸ್ ಪ್ರವೇಶಿಸುವ ಆಸೆಯನ್ನು ಬಹುತೇಕ ಕೈಚೆಲ್ಲಿದೆ. ಇನ್ನು ಪವಾಡ ನಡೆದರಷ್ಟೇ ಪಾಕಿಸ್ತಾನ ತಂಡವು ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿದೆ.