ರಾಂಚಿ[ನ.04]: ಕೇದಾರ್ ಜಾದವ್, ಶಹಬಾಜ್ ನದೀಮ್ ಆಕರ್ಷಕ ಪ್ರದರ್ಶನದ ನೆರವಿನಿಂದ ಪಾರ್ಥಿವ್ ಪಟೇಲ್ ನೇತೃತ್ವದ ಭಾರತ ’ಬಿ’ ತಂಡವು 51 ರನ್’ಗಳಿಂದ ಭಾರತ ’ಸಿ’ ತಂಡವನ್ನು ಮಣಿಸಿ ದೇವಧರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೇವಧರ್ ಟೂರ್ನಿಯಲ್ಲಿ ಒಂದು ಸೋಲು ಕಾಣದೇ ಫೈನಲ್ ಪ್ರವೇಶಿಸಿದ್ದ ಶುಭ್’ಮನ್ ಗಿಲ್ ನೇತೃತ್ವದ ಭಾರತ ’ಸಿ’ ತಂಡಕ್ಕೆ ಪಾರ್ಥಿವ್ ಪಡೆ ಸೋಲಿನ ರುಚಿ ತೋರಿಸಿತು.

ಇಲ್ಲಿನ JSCA ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ’ಬಿ’ ತಂಡ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ಕಳೆದುಕೊಂಡು 283 ರನ್ ಗಳಿಸಿತ್ತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ’ಸಿ’ ತಂಡ 9 ವಿಕೆಟ್ ಕಳೆದುಕೊಂಡು 232 ರನ್ ಗಳಿಸಲಷ್ಟೇ ಶಕ್ತವಾಯಿತು. ಮಯಾಂಕ್ ಅಗರ್ ವಾಲ್, ಶುಭ್’ಮನ್ ಗಿಲ್, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್ ಅವರಂತಹ ಬ್ಯಾಟ್ಸ್’ಮನ್’ಗಳಿದ್ದರೂ ಗೆಲುವಿನ ನಗೆ ಬೀರಲು ಭಾರತ ’ಸಿ’ ತಂಡಕ್ಕೆ ಸಾಧ್ಯವಾಗಲಿಲ್ಲ.

ದೇವಧರ್‌ ಟ್ರೋಫಿ 2019: ಭಾರತ ’ಸಿ’ ತಂಡಕ್ಕೆ ಗೆಲುವು

ಮಿಂಚಿದ ಕೇದಾರ್, ಶಹಬಾಜ್: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ’ಬಿ’ ತಂಡ 28 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮುಂಬೈ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್[54] ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್[86], ವಿಜಯ್ ಶಂಕರ್[45] ಹಾಗೂ ಕನ್ನಡಿಗ ಕೆ. ಗೌತಮ್ ಸಿಡಿಲಬ್ಬರದ[35 ರನ್, 10 ಎಸೆತ, ತಲಾ 3 ಸಿಕ್ಸರ್ ಹಾಗೂ ಬೌಂಡರಿ] ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು.

ಇನ್ನು ಭಾರತ ’ಸಿ’ ತಂಡದ ಘಟಾನುಘಟಿ ಬ್ಯಾಟ್ಸ್’ಮನ್’ಗಳನ್ನು ಕಟ್ಟಿಹಾಕುವಲ್ಲಿ ಶಹಬಾಜ್ ನದೀಮ್ ಯಶಸ್ವಿಯಾದರು. 10 ಓವರ್’ನಲ್ಲಿ ನದೀಮ್ ಒಂದು ಮೇಡನ್ ಸಹಿತ ಕೇವಲ 32 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಭಾರತ ’ಬಿ’ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.