ರಣಜಿ ಟ್ರೋಫಿಯ ಆಂಧ್ರ ವಿರುದ್ಧದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕರುಣ್ ನಾಯರ್ ಅವರ ಅಜೇಯ 81 ರನ್‌ಗಳ ನೆರವಿನಿಂದ ಚೇತರಿಸಿಕೊಂಡಿದೆ. ಮೂರನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿರುವ ರಾಜ್ಯ ತಂಡವು 32 ರನ್‌ಗಳ ಮುನ್ನಡೆ ಸಾಧಿಸಿದೆ. ಮುಂಬೈ, ಹೈದರಾಬಾದ್ ಮತ್ತು ಉತ್ತರ ಪ್ರದೇಶ ತಂಡಗಳು ತಮ್ಮ ಪಂದ್ಯಗಳಲ್ಲಿ ಇನ್ನಿಂಗ್ಸ್ ಜಯ ದಾಖಲಿಸಿವೆ.

ವಿಜಯವಾಡ: ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯ ಆಂಧ್ರ ವಿರುದ್ಧ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಕುಸಿತ ಕಂಡ ಕರ್ನಾಟಕ ತಂಡಕ್ಕೆ ಕರುಣ್‌ ನಾಯರ್‌ ಆಸರೆಯಾಗಿದ್ದಾರೆ. ತಂಡ 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 176 ರನ್‌ ಗಳಿಸಿದ್ದು, 32 ರನ್‌ ಮುನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 274ಕ್ಕೆ ಆಲೌಟಾಗಿದ್ದರೆ, ಇದಕ್ಕುತ್ತರವಾಗಿ ಆಂಧ್ರ 418 ರನ್‌ ಸಿಡಿಸಿ 144 ರನ್‌ ಮುನ್ನಡೆ ಪಡೆಯಿತು. ಸೀರಾಂ ವೆಂಕಟ ರಾಹುಲ್ 119, ಸಸಿಕಾಂತ್ 39 ರನ್‌ ಸಿಡಿಸಿದರು. ಸ್ಪಿನ್ನರ್‌ ಶಿಖರ್‌ ಶೆಟ್ಟಿ 6 ವಿಕೆಟ್‌ ಕಿತ್ತರು.

ರಾಜ್ಯ ತಂಡಕ್ಕೆ ಕರುಣ್ ನಾಯರ್ ಆಸರೆ:

ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡ 43 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ತಂಡವನ್ನು ಕಾಪಾಡಿದ್ದು ಕರುಣ್‌ ನಾಯರ್‌ ಹಾಗೂ ಮನ್ವಂತ್‌ ಕುಮಾರ್‌. ಈ ಜೋಡಿ 94 ರನ್‌ ಜೊತೆಯಾಟವಾಡಿತು. ಮನ್ವಂತ್‌ 44 ರನ್‌ಗೆ ಔಟಾಗಿದ್ದು, ಕರುಣ್‌ ಔಟಾಗದೆ 81 ರನ್‌ ಸಿಡಿಸಿ ನಾಯಕ ಆರ್‌.ಸ್ಮರಣ್(21) ಜೊತೆ ಕೊನೆ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ತಂಡ ಕೊನೆ ದಿನ ವೇಗವಾಗಿ ಆಟವಾಡಿ, ಆಂಧ್ರಕ್ಕೆ ದೊಡ್ಡ ಗುರಿ ನೀಡಿ ಗೆಲ್ಲಲು ಹೋರಾಡಬೇಕಿದೆ.

ಸ್ಕೋರ್: ಕರ್ನಾಟಕ 274/10 ಮತ್ತು 176/4(3ನೇ ದಿನದಂತ್ಯಕ್ಕೆ) (ಕರುಣ್‌ 81*, ಮನ್ವಂತ್ 44, ಸೌರಭ್ 3-41), ಆಂಧ್ರ 418/10 (ರಾಹುಲ್ 119, ಶಿಖರ್‌ 6-115, ಮಾಧವ್‌ 2-94, ರಿತೇಶ್‌ 2-109)

ಮುಂಬೈ, ಹೈದ್ರಾಬಾದ್, ಯುಪಿಗೆ ಇನ್ನಿಂಗ್ಸ್‌ ಜಯ

ಮಂಗಳವಾರ ಚಂಡೀಗಢ ವಿರುದ್ಧ ಮುಂಬೈ ಇನ್ನಿಂಗ್ಸ್‌ ಹಾಗೂ 155 ರನ್‌ ಗೆಲುವು ಸಾಧಿಸಿದರೆ, ತ್ರಿಪುರಾ ವಿರುದ್ಧ ಹೈದರಾಬಾದ್‌ ತಂಡ ಇನ್ನಿಂಗ್ಸ್‌ ಹಾಗೂ 40 ರನ್‌ಗಳಿಂದ ಜಯಗಳಿಸಿತು. ಬಿಹಾರ ವಿರುದ್ಧ ಉತ್ತರ ಪ್ರದೇಶ ಇನ್ನಿಂಗ್ಸ್‌ ಹಾಗೂ 267 ರನ್‌ ಭರ್ಜರಿ ಗೆಲುವು ಸಾಧಿಸಿತು. ಈ ಮೂರೂ ತಂಡಗಳು ತಲಾ 1 ಬೋನಸ್‌ ಸೇರಿ 7 ಅಂಕ ಸಂಪಾದಿಸಿವೆ.

ಮಧ್ಯಪ್ರದೇಶ ಮೇಲುಗೈ

ಶ್ರೀನಗರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಮ್ಮು-ಕಾಶ್ಮೀರ ವಿರುದ್ದ ಮಧ್ಯಪ್ರದೇಶ ಮೇಲುಗೈ ಸಾಧಿಸಿದೆ. ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 151 ರನ್ ಗಳಿಸಿದ್ದು, ಒಟ್ಟಾರೆ 227 ರನ್‌ಗಳ ಮುನ್ನಡೆಯಲ್ಲಿದೆ.