ವಿಮಾನ ಸಿಬ್ಬಂದಿ ಅವಾಂತರ, ಆಸಿಡ್ ಕುಡಿದ ಮಯಾಂಕ್ ಅಗರ್ವಾಲ್?
ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ರಣಜಿ ತಂಡದ ಆಟಗಾರ ಮಯಾಂಕ್ ಅಗರ್ವಾಲ್‌ಗೆ ವಿಮಾನದಲ್ಲಿಯೇ ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ ನೀರು ಕುಡಿದ ಬೆನ್ನಲ್ಲಿಯೇ ಅವರು ಅಸ್ವಸ್ಥರಾಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರು (ಜ.30): ಕರ್ನಾಟಕ ತಂಡದ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರಿಗೆ ವಿಮಾನದಲ್ಲಿಯೇ ಅಕಸ್ಮಾತ್ ಆಗಿ ಆಸಿಡ್ ಕುಡಿದಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ರಣಜಿ ತಂಡದೊಂದಿಗೆ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ. ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ವಿಮಾನದಲ್ಲಿ ಕುಳಿತಿದ್ದ ಮಯಾಂಕ್ ಅಗರ್ವಾಲ್ ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದಿದ್ದರು. ನೀರು ಕುಡಿಯುತಿದ್ದಂತೆ ನಾಲಿಗೆ, ಬಾಯಿ, ಕೆನ್ನೆ ಸುಟ್ಟು ಹೋದ ಅನುಭವವಾಗಿದೆ. ಮಾತಾಡಲು ಸಾಧ್ಯವಾಗದೆ ಮಯಾಂಕ್ ಅಗರ್ವಾಲ್ ಸೀಟ್‌ನಲ್ಲಿಯೇ ಒರಗಿ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ಮಯಾಂಕ್ ಶಿಫ್ಟ್ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದಿದ್ದ ಕರ್ನಾಟಕ, ತನ್ನ ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ ಪ್ರಯಾಣ ನಡೆಸುವ ಹಾದಿಯಲ್ಲಿತ್ತು.
ಮಯಾಂಕ್ ಅಗರ್ವಾಲ್‌ರನ್ನು ಆಸ್ಪತ್ರೆಗೆ ಒಂದು ಕಡಡೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದರೆ, ಇನ್ನೊಂದೆಡೆ ವಿಮಾನದ ಸಿಬ್ಬಂದಿಗಳು ನೀರಿನ ಬಾಟಲ್‌ಅನ್ನು ವಶಕ್ಕೆ ಪಡೆದುಕೊಂಡು, ಅದರ ತನಿಖೆ ಆರಂಭಿಸಿದ್ದಾರೆ. ಕರ್ನಾಟಕ ರಣಜಿ ತಂಡವಾಗಲಿ, ವಿಮಾನದ ಸಿಬ್ಬಂದಿಯಾಗಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಸದ್ಯದ ಮಾಹಿತಿಯ ಪ್ರಕಾರ ವಿಮಾನದ ಸಿಬ್ಬಂದಿ ನೀರಿನ ಬಾಟಲಿ ಇಡುವ ಜಾಗದಲ್ಲಿ ಆಸಿಡ್ ಇಟ್ಟಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ನೀರು ಎಂದುಕೊಂಡು ಮಯಾಂಕ್ ಅಗರ್ವಾಲ್ ಇದನ್ನು ಕುಡಿದಿದ್ದಾರೆ. ಕುಡಿದ ಬೆನ್ನಲ್ಲಿಯೇ ಸುಟ್ಟ ಅನುಭವವಾಗಿದ್ದರಿಂದ ಅಲ್ಲಿಯೇ ಉಗುಳಿದಿದ್ದಾರೆ. ಆಸಿಡ್‌ನ ಅಂಶ ಹೊಟ್ಟಗೆ ಹೋಗಿರುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ಗಮನ ನೀಡಿದ್ದಾರೆ.