Asianet Suvarna News Asianet Suvarna News

WPL 2023: ಒಂದು ಅವಕಾಶಕ್ಕಾಗಿ ತುದಿಗಾಲಲ್ಲಿ ನಿಂತ ಕನ್ನಡತಿ ದಿವ್ಯಾ ಜ್ಞಾನಾನಂದ..!

ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಆಡುವ ಕನವರಿಕೆಯಲ್ಲಿದ್ದ ದಿವ್ಯಾ ಜ್ಞಾನಾನಂದಗೆ ನಿರಾಸೆ
ದಿವ್ಯಾ ಜ್ಞಾನಾನಂದ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕಿತ ಬ್ಯಾಟರ್
ಒಂದು ಒಳ್ಳೆಯ ಅವಕಾಶ ಎದುರು ನೋಡುತ್ತಿರುವ ದಿವ್ಯಾ ಜ್ಞಾನಾನಂದ

Karnataka Talented Women Cricketer Divya Gnanananda eyes on one good Opportunity after Unsold in WPL 2023 kvn
Author
First Published Mar 9, 2023, 6:19 PM IST

ಬೆಂಗಳೂರು(ಮಾ.09): ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಮಿಂಚಿದ್ದ ಕರ್ನಾಟಕದ ಅಗ್ರಶ್ರೇಯಾಂಕಿತ ಬ್ಯಾಟರ್‌ ದಿವ್ಯಾ ಜ್ಞಾನಾನಂದ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಡುವ ಕನವರಿಕೆಯಲ್ಲಿದ್ದರು. ಆದರೆ 10 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ದಿವ್ಯಾ ಜ್ಞಾನಾನಂದ ಅವರನ್ನು ಯಾವೊಂದು ಫ್ರಾಂಚೈಸಿಯು ಖರೀದಿಸದೇ ಹೋದದ್ದು ನಿಜಕ್ಕೂ ಅಚ್ಚರಿಗೀಡಾಗುವಂತೆ ಮಾಡಿತ್ತು. ಡಬ್ಲ್ಯೂಪಿಎಲ್‌ನಲ್ಲಿ ಹರಾಜಾಗದೇ ಇದ್ದಿದ್ದಕ್ಕೆ ನನಗೇನು ಬೇಸರವಿಲ್ಲ, ಮುಂಬರುವ ದಿನಗಳಲ್ಲಿ ನಾನು ಇನ್ನಷ್ಟು ಪರಿಶ್ರಮಪಟ್ಟು ಫ್ರಾಂಚೈಸಿ ಹಾಗೂ ಆಯ್ಕೆಗಾರರ ಗಮನ ಸೆಳೆಯುತ್ತೇನೆ ಎನ್ನುವ ಆತ್ಮವಿಶ್ವಾಸದ ನುಡಿ ದಿವ್ಯಾ ಅವರದ್ದು.

ಮೂಲತಃ ಬೆಂಗಳೂರು ಮೂಲದ ಬ್ಯಾಟರ್ ದಿವ್ಯಾ ಜ್ಞಾನಾನಂದ ಅವರು ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಸೀನಿಯರ್ ಇಂಟರ್ ಝೋನಲ್ ಟೂರ್ನಿಯಲ್ಲಿ 49.50 ಬ್ಯಾಟಿಂಗ್ ಸರಾಸರಿಯಲ್ಲಿ ದಿವ್ಯಾ 396 ರನ್ ಸಿಡಿಸಿದ್ದರು. ಕಳೆದ 11 ಇನಿಂಗ್ಸ್‌ಗಳಲ್ಲಿ ದಿವ್ಯಾ ಎರಡು ಅರ್ಧಶತಕ ಹಾಗೂ ಒಂದು ಅಜೇಯ ಶತಕದ ಸಹಿತ 400ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡದ ಪರ ಎರಡನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ದಿವ್ಯಾ, ಅಖಿಲ ಭಾರತ ಸೀನಿಯರ್ಸ್‌ ವುಮೆನ್ಸ್ ಏಕದಿನ ಟೂರ್ನಿಯಲ್ಲಿ ಒಟ್ಟಾರೆ 5ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ಹೀಗಾಗಿ ಹರಾಜಿನಲ್ಲಿ ತಾವು ಸೋಲ್ಡ್ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಆರ್‌ಸಿಬಿ ಸೇರಿದಂತೆ ಉಳಿದ ಫ್ರಾಂಚೈಸಿಗಳು ಡಬ್ಲ್ಯೂಪಿಎಲ್‌ ಹರಾಜಿನಲ್ಲಿ ದಿವ್ಯಾ ಅವರನ್ನು ಖರೀದಿಸಲು ಒಲವು ತೋರಲಿಲ್ಲ..

ಹೆರಾನ್ಸ್‌ ಕ್ರಿಕೆಟ್ ಕ್ಲಬ್ ಪ್ರತಿನಿಧಿಸುವ ದಿವ್ಯಾ ಜ್ಞಾನಾನಂದ, 2022-23ನೇ ಸಾಲಿನ ಸೀನಿಯರ್ ಇಂಟರ್ ಝೋನಲ್‌ ಏಕದಿನ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡದ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜು ನಡೆಯುವ ವೇಳೆ ಉತ್ತಮ ಲಯದಲ್ಲಿದ್ದ ದಿವ್ಯಾಗೆ ಇದೀಗ ನಿರಾಸೆ ಎದುರಾಗಿದೆ. 

WPL Auction: ಸ್ಮೃತಿ ಮಂಧನಾ, ರಿಚಾ ಘೋಷ್ ಸೇರಿದಂತೆ ಬಲಿಷ್ಠ ಮಹಿಳಾ ತಂಡವನ್ನು ಕಟ್ಟಿದ RCB..!

ಈ ಕುರಿತಂತೆ ಏಷ್ಯಾನೆಟ್‌ ಸುವರ್ಣ ನ್ಯೂಸ್.ಕಾಂ ಜತೆ ಮಾತನಾಡಿದ ಅವರು, "ನನ್ನ ಜೀವನದಲ್ಲಿ ಸಾಕಷ್ಟು ನಿರಾಸೆ ಹಾಗೂ ಅನ್ಯಾಯಗಳನ್ನು ಎದುರಿಸಿದ್ದೇನೆ. ಅವುಗಳ ಪೈಕಿ ಇದೂ ಒಂದು ಎಂದು ಭಾವಿಸುತ್ತೇನೆ. ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲವೆನ್ನುವ ಭಾವನೆ ಮೂಡುತ್ತಿದೆ. ಆದರೆ ನನ್ನ ಪ್ರದರ್ಶನವು ಮುಂಬರುವ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಅವಕಾಶವನ್ನು ಸೃಷ್ಟಿಸಲಿದೆ ಎನ್ನುವ ವಿಶ್ವಾಸವಿದೆ. ನಾನು ಕ್ರಿಕೆಟ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರುವತ್ತ ಕಠಿಣ ಪರಿಶ್ರಮ ಪಡುತ್ತೇನೆ. ನನಗೊಂದು ಅವಕಾಶ ಸಿಕ್ಕರೇ, ಎರಡೂ ಕೈಗಳಲ್ಲಿ ಆ ಅವಕಾಶ ಬಾಚಿಕೊಂಡು ನನ್ನ ಸ್ಥಾನಕ್ಕೆ ನ್ಯಾಯ ಒದಗಿಸುತ್ತೇನೆ" ಎಂದು ದಿವ್ಯಾ ಜ್ಞಾನಾನಂದ ಹೇಳಿದ್ದಾರೆ. 

Follow Us:
Download App:
  • android
  • ios