* ವಿಜಯ್‌ ದಿವಸ್‌ ಎಂದೂ ಮರೆಯದ ಸಮರ* ದುಷ್ಟ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಭಾರತ* ಇಂದು ಕಾರ್ಗಿಲ್‌ ವಿಜಯ್‌ ದಿವಸ್‌ (ಸೀಲ್‌)

ಕಾರ್ಗಿಲ್‌ ಯುದ್ಧ... ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾಕಿಸ್ತಾನ ಶಾಂತಿಯ ಮಾತಿನ ಬೆನ್ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್‌. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟಹೊಡೆತದ ನೆನಪಿನ ದಿನವೇ ಕಾರ್ಗಿಲ್‌ ವಿಜಯ್‌ ದಿವಸ್‌.

ಕಾರ್ಗಿಲ್‌ ಎಲ್ಲಿದೆ?

ಭಾರತದ ಮುಕುಟ ಮಣಿಯಂತಿರುವ ಕಾಶ್ಮೀರದಲ್ಲಿದೆ. ಇಂದಿನ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನ ಒಂದು ತಹಸೀಲ್‌ ಈ ಕಾರ್ಗಿಲ್‌. ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ. ಲೇಹ್‌ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್‌ ಮೂಲಕ ಹಾದು ಹೋಗುತ್ತದೆ. ನೆನಪಿರಲಿ ಈ ಪ್ರದೇಶದಲ್ಲಿರುವ ಏಕೈಕ ಹೆದ್ದಾರಿ ಇದೊಂದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.

1999ರಲ್ಲಿ ಆಗಿದ್ದೇನು?

ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಇಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಇದ್ದ ಪದ್ಧತಿ. ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಸೈನಿಕರು, ಪ್ಯಾರಾಮಿಲಿಟರಿ ಪಡೆಯನ್ನು ಬಳಸಿ ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ 107 ಕಿ.ಮೀ. ದೂರದಲ್ಲಿರುವ ಸ್ಕರ್ದು (ಪಾಕ್‌ ಅಕ್ರಮಿತ ಪ್ರದೇಶ)ವಿನಿಂದ ಕಾರ್ಗಿಲ್‌ನ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತ ಉಗ್ರರಿಗೆ ಶಸ್ತಾ್ರಸ್ತ್ರ ಪೂರೈಸಲು ಅನುಕೂಲವಾಗುತ್ತದೆ ಎಂದು ಪಾಕ್‌ ಯೋಜಿಸಿತ್ತು.

ಶಾಂತಿ ಮಂತ್ರದ ಬೆನ್ನಲ್ಲೇ ಪಾಕಿಸ್ತಾನದ ಮೋಸದಾಟ

ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಗಡಿಯ ಮೂಲಕವೇ ತೆರಳಿ ಶಾಂತಿ ಮಂತ್ರ ಪಠಿಸಿದ್ದರು. ಅಲ್ಲದೆ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ದೆಹಲಿ-ಲಾಹೋರ್‌ ನಡುವೆ ಶಾಂತಿಯ ಸೂಚಕವಾಗಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕಾರ್ಗಿಲ್‌ನಲ್ಲಿ ತನ್ನ ಕುಚೇಷ್ಟೆಯನ್ನು ಪ್ರದರ್ಶಿಸಿತು.

ಕುರಿಗಾಹಿಗಳು ನೀಡಿದ ಸುಳಿವು

1999ರ ಮೇ 3ರಂದು ಕಾರ್ಗಿಲ್‌ ಗುಡ್ಡಗಾಡು ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳು ನಮ್ಮ ಪ್ರದೇಶದಲ್ಲಿ ಪಾಕಿಸ್ತಾನಿಗಳ ಇರುವಿಕೆಯ ಸುಳಿವನ್ನು ಭಾರತದ ಸೈನ್ಯಕ್ಕೆ ನೀಡಿದರು. ಮೇ 5ರಂದು ಭಾರತೀಯ ಸೇನೆಯ ಪೆಟ್ರೋಲಿಂಗ್‌ ತಂಡವು ಕಾರ್ಗಿಲ್‌ ಪ್ರದೇಶದ ಸ್ಥಿತಿ ಅವಲೋಕಿಸಲು ತೆರಳಿದಾಗ ಅವರನ್ನು ಸೆರೆ ಹಿಡಿದ ಪಾಕ್‌ ಸೈನಿಕರು, ನಮ್ಮ ಸೈನಿಕರನ್ನು ಅತ್ಯಂತ ಹೀನವಾಗಿ ಕೊಂದುಹಾಕಿದರು. ಇದಾದ ಬಳಿಕ ಸಂಪೂರ್ಣವಾಗಿ ಎಚ್ಚೆತ್ತ ಭಾರತೀಯ ಸೇನೆಯು ಯುದ್ಧಕ್ಕೆ ಸಜ್ಜಾಯಿತು. ಇಡೀ ಕಾರ್ಯಾಚರಣೆಗೆ ಆಪರೇಷನ್‌ ವಿಜಯ್‌ ಎಂದು ಹೆಸರಿಸಿ ಯುದ್ಧಕ್ಕೆ ಇಳಿಯಿತು.

ಇದು ಜಗತ್ತಿನ ಅತ್ಯಂತ ವಿಶಿಷ್ಟ ಯುದ್ಧ ಏಕೆ?

ಬೆಟ್ಟದ ಮೇಲೆ ಕುಳಿತಿದ್ದ ಪಾಕ್‌ಗೆ ಯುದ್ಧ ಮಾಡಲು ಹೆಚ್ಚು ಅನುಕೂಲಗಳಿದ್ದವು. ಬೆಟ್ಟಗಳ ತಳಭಾಗದಿಂದ ಮೇಲಕ್ಕೆ ಹೋಗುವುದು ಭಾರತೀಯ ಸೈನಿಕರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಮದ್ದುಗುಂಡುಗಳನ್ನು ಹೊತ್ತು ಬೆಟ್ಟಹತ್ತಿ ಪಾಕ್‌ ಸೈನಿಕರನ್ನು ಬಗ್ಗು ಬಡಿದದ್ದು, ಪ್ರಪಂಚದ ಯುದ್ಧ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪಾಯಿಂಟ್‌ 5353ಯನ್ನು ಮರುವಶ ಮಾಡಿಕೊಂಡ ಭಾರತೀಯ ಸೇನೆಯು ಬಳಿಕ ಬಟಾಲಿಕ್‌ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಟೈಗರ್‌ ಹಿಲ್‌ ಪ್ರದೇಶವನ್ನು ವಶಕ್ಕೆ ಪಡೆದಿದ್ದು ಭಾರತೀಯ ಸೇನೆಗೆ ಸಿಕ್ಕಿ ಅತಿ ದೊಡ್ಡ ಜಯ. ಬಳಿಕ ಇನ್ನಿತರ ಪ್ರದೇಶವನ್ನು ಒಂದೊಂದಾಗಿ ತನ್ನದಾಗಿಸಿಕೊಂಡ ಭಾರತೀಯ ಸೇನೆಯು ತನ್ನ ತಾಕತ್ತು ಏನು ಎಂಬುದನ್ನು ಪಾಕಿಸ್ತಾನಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು.

ಆಪರೇಷನ್‌ ಸಫೇದ್‌ ಸಾಗರ್‌

ಕಾರ್ಗಿಲ್‌ ಯುದ್ಧದ ವೇಳೆ ಕಾಶ್ಮೀರದ ಪಾಕ್‌ ಆಕ್ರಮಿತ ಪ್ರದೇಶಗಳ ಮೇಲೆ ಭಾರತೀಯ ವಾಯು ಸೇನೆಯು ಆಪರೇಷನ್‌ ಸಫೇದ್‌ ಸಾಗರ್‌ ಹೆಸರಲ್ಲಿ ಮೇ 26ರಂದು ದಾಳಿ ಆರಂಭಿಸಿತು. ಎಂಐಜಿ 21, 27 ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿತು. ಮೇ 27ರಂದು ಎಂಐಜಿ-27 ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರಳಿಸಿತು. ಅದರಲ್ಲಿದ್ದ ಲೆಫ್ಟಿನೆಂಟ್‌ ಕಂಬಂಪತಿ ನಚಿಕೇತ ಅವರನ್ನು ಪಾಕ್‌ ಸೆರೆ ಹಿಡಿಯಿತು. ಯುದ್ಧದ ಬಳಿಕ ಅವರನ್ನು ಬಿಡುಗಡೆ ಮಾಡಿತು.

ಆಪರೇಷನ್‌ ತಳವಾರ್‌

ನೌಕಾ ಪಡೆಯು ‘ಆಪರೇಷನ್‌ ತಳವಾರ್‌’ ಹೆಸರಿನಲ್ಲಿ ಪಾಕಿಸ್ತಾನದ ವಾಣಿಜ್ಯ ನಗರ ಕರಾಚಿಯ ಮೇಲೆ ಕಣ್ಣಿಟ್ಟಿತ್ತು. ಅರಬ್ಬಿ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿದ್ದ ನೌಕಾ ಪಡೆಯು ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನ ಹೋಗದಂತೆ ತಡೆದಿತ್ತು. ಒಂದು ವೇಳೆ ಯುದ್ಧ ಇನ್ನು 10 ದಿನ ಮುಂದುವರಿದಿದ್ದರೂ ಪಾಕಿಸ್ತಾನದ ಸ್ಥಿತಿ ಅಧೋಗತಿಗೆ ತಲುಪುತ್ತಿತ್ತು. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳೇ ಪಾಕಿಸ್ತಾನದಲ್ಲಿ ಮುಗಿಯುವ ಹಂತಕ್ಕೆ ಬಂದಿದ್ದವು ಎಂದು ಅಂದಿನ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಹೇಳಿಕೊಂಡಿದ್ದರು.

ಜುಲೈ 14ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಜುಲೈ 24ರಂದು ಭಾರತೀಯ ಸೇನೆಯು ಕಾರ್ಗಿಲ್‌ ಯುದ್ಧ ಮುಗಿದ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಬಳಿಕ ಪ್ರತಿವರ್ಷ ಜೂನ್‌ 26ರಂದು ವಿಜಯ್‌ ದಿವಸ್‌ ಆಚರಣೆ ಆರಂಭವಾಯಿತು.

ಪಾಕ್‌ ಈ ಯುದ್ಧ ಆರಂಭಿಸಿದ್ದೇಕೆ?

- ಕಾರ್ಗಿಲ್‌ ಪ್ರದೇಶವನ್ನು ಹೋರಾಟಗಾರರು ವಶಕ್ಕೆ ಪಡೆದಿದ್ದಾರೆ, ಹಾಗಾಗಿ ಕಾಶ್ಮೀರವನ್ನು ಸ್ವತಂತ್ರ ದೇಶ ಎಂದು ಘೋಷಿಸಲು ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಸೃಷ್ಟಿಸುವುದು.

- ಭಾರತವು ವಿಶ್ವದ ಅತಿ ಎತ್ತರದ ಯುದ್ಧ ಪ್ರದೇಶವಾದ ಸಿಯಾಚಿನ್‌ನಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಲು ಪಾಕ್‌ ಯೋಜಿಸಿತ್ತು. ಏಕೆಂದರೆ ಈ ಪ್ರದೇಶ ಎರಡೂ ದೇಶಗಳ ಆಯಾಕಟ್ಟಿನ ಜಾಗದಲ್ಲಿದ್ದು, ಮಹತ್ವದ ಪ್ರದೇಶವಾಗಿದೆ.

- ಕಾರ್ಗಿಲ್‌ನಲ್ಲಿ ಎನ್‌ಎಚ್‌-1 ಹಾದು ಹೋಗುತ್ತದೆ. ಈ ಹೆದ್ದಾರಿಯು ಶ್ರೀನಗರ ಮತ್ತು ಲೇಹ್‌ ಅನ್ನು ಸಂಪರ್ಕಿಸುವ ಏಕೈಕ ಮಾರ್ಗ. ಇದರ ಮೇಲೆ ಹಿಡಿತ ಸಾಧಿಸಿದರೆ ಭಾರತವನ್ನು ತನಗೆ ಬೇಕಾದಂತೆ ಬಗ್ಗಿಸಬಹುದು ಎಂಬ ಕಲ್ಪನೆ ಪಾಕಿಸ್ತಾನಕ್ಕಿತ್ತು. ಆದರೆ ಅದು ಸಂಪೂರ್ಣ ವಿಫಲವಾಯಿತು.

- ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಭಾರತದ ಸಂಯಮವನ್ನು ವಿಶ್ವವೇ ಮೆಚ್ಚಿತು. ಏಕೆಂದರೆ ತನ್ನ ಪ್ರದೇಶವನ್ನು ಮಾತ್ರ ವಶಕ್ಕೆ ಪಡೆದ ಭಾರತ ಒಮ್ಮೆಯೂ ಕೂಡ ಗಡಿ ದಾಟಿ ಪಾಕಿಸ್ತಾನದ ಮೇಲೆ ಮುಗಿಬೀಳಲಿಲ್ಲ.