Asianet Suvarna News Asianet Suvarna News

Kargil Vijay Diwas: ವೀರ ಯೋಧರಿಗೆ ಶತ ಶತ ನಮನ ಸಲ್ಲಿಸಿದ ಕ್ರೀಡಾ ತಾರೆಯರು..!

ದೇಶದಾದ್ಯಂತ 23ನೇ ಕಾರ್ಗಿಲ್ ವಿಜಯ್ ದಿವಸ್‌ ಆಚರಣೆ
ಕಾರ್ಗಿಲ್ ವಿಜಯ್ ದಿವಸ್‌ಗೆ ನುಡಿನಮನ ಸಲ್ಲಿಸಿದ ದೇಶದ ಕ್ರೀಡಾತಾರೆಯರು
ಪ್ರತಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ

Kargil Vijay Diwas Indian Cricket Fraternity Pays Tribute To our War Heroes kvn
Author
Bengaluru, First Published Jul 26, 2022, 6:22 PM IST

ಬೆಂಗಳೂರು(ಜು.26): ಪ್ರತಿ ಜುಲೈ 26ನೇ ತಾರೀಖನ್ನು ದೇಶದಾದ್ಯಂತ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕುತಂತ್ರವನ್ನು ಮೆಟ್ಟಿ ನಿಂತ ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವ ದಿನವೇ ಕಾರ್ಗಿಲ್ ವಿಜಯ್ ದಿವಸ್. 1999ರಲ್ಲಿ ನಡೆದ ಕಾರ್ಗಿಲ್‌ ಯುದ್ದದಲ್ಲಿ ನೆರೆಯ ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡಿದು ಭಾರತೀಯ ಸೈನಿಕರು ಜುಲೈ 26ರಂದು ವಿಜಯೋತ್ಸವ ಆಚರಿಸಿದ್ದರು. ಇದೀಗ ಭಾರತದ ಕ್ರೀಡಾ ತಾರೆಯರು ಟ್ವೀಟ್ ಮಾಡುವ ಮೂಲಕ ಕಾರ್ಗಿಲ್ ವಿಜಯ್ ದಿವಸ್‌ಗೆ ಗೌರವ ಸಲ್ಲಿಸಿದ್ದಾರೆ.

ದೇಶ, ಗಡಿ ವಿಚಾರದಲ್ಲಿ ಸದಾ ಚುರುಕಾಗಿ ಪ್ರತಿಕ್ರಿಯಿಸುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೊಮ್ಮೆ ವಿನೂತನವಾಗಿ ಟ್ವೀಟ್ ಮಾಡಿದ್ದಾರೆ. ನಾವೆಲ್ಲರೂ ಉಸಿರಾಡಲು ಕಷ್ಟಪಡುವಂತಹ ಜಾಗದಲ್ಲಿ, ನಮ್ಮವರು ಯುದ್ದವನ್ನೇ ಗೆದ್ದರು. ದೈರ್ಯಶಾಲಿಗಳಲ್ಲೇ ಪರಮಧೈರ್ಯಶಾಲಿಗಳಿಗೆ ಸಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಕೂಡಾ ಕಾರ್ಗಿಲ್ ವಿಜಯ್ ದಿವಸ್‌ಗೆ ಸಾಥ್ ನೀಡಿದ್ದಾರೆ. ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡಿದ ನಮ್ಮ ಧೈರ್ಯಶಾಲಿ ಭಾರತೀಯ ಸೈನಿಕರಿಗೆ ಸಲ್ಯೂಟ್‌. ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಮ್ಮ ಸೈನಿಕರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿಕೊಳ್ಳೋಣ. ಜೈ ಹಿಂದ್ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹಾಗೂ ರಾಜ್ಯಸಭಾ ಸಂಸದರಾಗಿರುವ ಹರ್ಭಜನ್ ಸಿಂಗ್, ನಮ್ಮ ದೇಶದ ಉಳಿವಿಗಾಗಿ ಹುತಾತ್ಮರಾದ ನನ್ನೆಲ್ಲಾ ಸಹೋದರರಿಗೆ ಸಲ್ಯೂಟ್. ಇಡೀ ದೇಶವೇ ನಿಮಗೆ ಕೃತಜ್ಞರಾಗಿರಲಿದೆ. ಕಾರ್ಗಿಲ್‌ ವಿಜಯ್ ದಿವಸ್‌ಗೆ 23 ವರ್ಷಗಳು ತುಂಬಿವೆ. ಜೈ ಹಿಂದ್ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್ ಯುದ್ದದಲ್ಲಿ ತಾಯ್ನಾಡನ್ನು ರಕ್ಷಿಸಲು ನಿಸ್ವಾರ್ಥತೆಯಿಂದ ಹೋರಾಡಿ ಬಲಿದಾನ ಮಾಡಿದ ಧೈರ್ಯಶಾಲಿ ವೀರರಿಗೆ ನನ್ನದೊಂದು ಸಲ್ಯೂಟ್. ನಾವೆಲ್ಲರೂ ಎಂದೆದಿಗೂ ನಮ್ಮ ಸೈನಿಕರಿಗೆ ಋಣಿಯಾಗಿದ್ದೇವೆ. ಜೈ ಹಿಂದ್ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅಷ್ಟಕ್ಕೂ 1999ರಲ್ಲಿ ಆಗಿದ್ದೇನು?

ಕಣಿವೆ ಪ್ರದೇಶವಾದ ಕಾರ್ಗಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಇಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತದ ಸೈನಿಕರ ಪಾಲಿಗೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಇದ್ದ ಪದ್ಧತಿ. ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಸೈನಿಕರು, ಪ್ಯಾರಾಮಿಲಿಟರಿ ಪಡೆಯನ್ನು ಬಳಸಿ ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಕಾರ್ಗಿಲ್ ಯುದ್ದವು ಮೇ 08ರಿಂದ ಆರಂಭವಾಗಿ ಜುಲೈ 24ರವರೆಗೂ ನಡೆಯಿತು. ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಮೆಟ್ಟಿನಿಂತು ಭಾರತ ಭಾರತೀಯ ಸೈನಿಕರು ಗೆಲುವಿನ ಕೇಕೆ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾದರು. 1999ರ ಜುಲೈ 14ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಜುಲೈ 24ರಂದು ಭಾರತೀಯ ಸೇನೆಯು ಕಾರ್ಗಿಲ್‌ ಯುದ್ಧ ಮುಗಿದ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಬಳಿಕ ಪ್ರತಿವರ್ಷ ಜೂನ್‌ 26ರಂದು ವಿಜಯ್‌ ದಿವಸ್‌ ಆಚರಣೆ ಆರಂಭವಾಯಿತು.

Follow Us:
Download App:
  • android
  • ios