ಗಾಬಾ ಟೆಸ್ಟ್ ಬೆನ್ನಲ್ಲೇ ಆಸ್ಟ್ರೇಲಿಯಾಗೆ ಬಿತ್ತು ದೊಡ್ಡ ಹೊಡೆತ; ಸ್ಟಾರ್ ಕ್ರಿಕೆಟಿಗ ಟೆಸ್ಟ್ ಸರಣಿಯಿಂದಲೇ ಔಟ್!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಿಂದ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಹೊರಬಿದ್ದಿದ್ದಾರೆ. ಫಾಲೋ ಆನ್ ಭೀತಿಯಿಂದ ಪಾರಾದ ಭಾರತ, ಬುಮ್ರಾ ಮತ್ತು ಆಕಾಶ್‌ದೀಪ್ ಜತೆಯಾಟದ ನೆರವಿನಿಂದ ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ.
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಫಾಲೋ ಆನ್ ಭೀತಿಗೆ ಸಿಲುಕಿದ್ದ ಟೀಂ ಇಂಡಿಯಾ, ಕೊನೆಗೂ ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್‌ದೀಪ್ ಆಕರ್ಷಕ ಜತೆಯಾಟದ ನೆರವಿನಿಂದ ಫಾಲೋ ಆನ್ ಭೀತಿಯಿಂದ ಪಾರಾಗಿದೆ. ಇನ್ನು ಇದೆಲ್ಲದರ ನಡುವೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೇಜಲ್‌ವುಡ್ ಔಟ್:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಇಲ್ಲಿನ ಗಾಬಾದಲ್ಲಿ ನಡೆಯುತ್ತಿದೆ. ಹೀಗಿರುವಾಗಲೇ ಕಾಂಗರೂ ಪಡೆಗೆ ಬಿಗ್ ಶಾಕ್ ಎದುರಾಗಿದ್ದು ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಮೀನಖಂಡ ನೋವಿನಿಂದ ಬಳಲುತ್ತಿರುವ ಜೋಶ್ ಹೇಜಲ್‌ವುಡ್, ಗಾಬಾ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆರಂಭದಲ್ಲೇ ಮೈದಾನ ತೊರೆದರು. ಜೋಶ್ ಹೇಜಲ್‌ವುಡ್, ಫಿಟ್ನೆಸ್ ಸಮಸ್ಯೆಯಿಂದಾಗಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು. ಇದೀಗ ಇನ್ನುಳಿದ ಬಾಕ್ಸಿಂಗ್ ಡೇ ಟೆಸ್ಟ್ ಹಾಗೂ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಗಾಬಾ ಟೆಸ್ಟ್ ಪಂದ್ಯದಲ್ಲೂ ಹೇಜಲ್‌ವುಡ್ ಕೇವಲ 6 ಓವರ್ ಅಷ್ಟೇ ಬೌಲಿಂಗ್ ಮಾಡಲು ಶಕ್ತರಾಗಿದ್ದರು. ಕೊಹ್ಲಿಯನ್ನು ಬಲಿ ಪಡೆಯುವ ಮೂಲಕ ಹೇಜಲ್‌ವುಡ್ ಭಾರತಕ್ಕೆ ಶಾಕ್ ನೀಡಿದ್ದರು.
ಟೀಂ ಇಂಡಿಯಾವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿದ ಬುಮ್ರಾ-ಆಕಾಶ್‌ದೀಪ್ ಜೋಡಿ!
ಡ್ರಾನತ್ತ ಗಾಬಾ ಟೆಸ್ಟ್:
ಗಾಬಾ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಟ್ರ್ಯಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಪಂದ್ಯಕ್ಕೆ ಎರಡನೇ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸಿತ್ತು. ಇನ್ನು ಮೂರನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದಯನೀಯ ಬ್ಯಾಟಿಂಗ್ ವೈಪಲ್ಯ ಅನುಭವಿಸಿದರು. ಪರಿಣಾಮ 74 ರನ್ ಗಳಿಸುವಷ್ಟರಲ್ಲಿ ಭಾರತದ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಇನ್ನು ಇದಾದ ಬಳಿಕ ಜಡೇಜಾ ಹಾಗೂ ಕೆ ಎಲ್ ರಾಹುಲ್ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡಕ್ಕೆ ಕೊಂಚ ಆಸರೆಯಾದರು. ಹೀಗಿದ್ದೂ ಕೆ ಎಲ್ ರಾಹುಲ್ 139 ಎಸೆತಗಳನ್ನು ಎದುರಿಸಿ 84 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಜಡೇಜಾ ಆಕರ್ಷಕ 77 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
13 ವರ್ಷಗಳ ಬಳಿಕ ಫಾಲೋ ಆನ್ ಭೀತಿಯಲ್ಲಿ ಟೀಂ ಇಂಡಿಯಾ; ಅಷ್ಟಕ್ಕೂ ಫಾಲೋ ಆನ್ ಹೇರೋದು ಹೇಗೆ?
ಇನ್ನು ಜಡೇಜಾ 213 ರನ್‌ಗಳಿದ್ದಾಗ ಒಂಬತ್ತನೆಯವರಾಗಿ ವಿಕೆಟ್ ಒಪ್ಪಿಸಿದರು. ಹೀಗಿದ್ದೂ ಟೀಂ ಇಂಡಿಯಾ ಫಾಲೋ ಆನ್‌ನಿಂದ ಪಾರಾಗಲು 33 ರನ್‌ಗಳ ಅಗತ್ಯವಿತ್ತು. ಈ ವೇಳೆ 10ನೇ ವಿಕೆಟ್‌ಗೆ ಜತೆಯಾದ ಆಕಾಶ್‌ದೀಪ್ ಹಾಗೂ ಜಸ್ಪ್ರೀತ್ ಬುಮ್ರಾ ಮುರಿಯದ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಟೆಸ್ಟ್‌ನಲ್ಲಿ ಇನ್ನೊಂದು ದಿನ ಮಾತ್ರ ಬಾಕಿ ಇರುವುದರಿಂದ ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ.