ಮ್ಯಾಂಚೆಸ್ಟರ್(ಸೆ.14): ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 24 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. 232 ರನ್‌ಗಳ ಸುಲಭ ಗುರಿ ಪಡೆದಿದ್ದ ಆಸ್ಟ್ರೇಲಿಯಾ 207 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಕಂಡಿದೆ. ಇದರೊಂಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿವೆ.

ಇಂಗ್ಲೆಂಡ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೋಫ್ರಾ ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಅವರನ್ನು ಪೆವಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಆ ಬಳಿಕ ನಾಯಕ ಫಿಂಚ್ ಹಾಗೂ ಮಾರ್ನಸ್ ಲಬುಶೇನ್ ಮೂರನೇ ವಿಕೆಟ್‌ಗೆ 107 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಲಬುಶೇನ್(48) ಹಾಗೂ ಫಿಂಚ್(73) ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡಿತು. 

ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

ಮೊದಲ ಪಂದ್ಯದಲ್ಲಿ ಹೀರೋ ಆಗಿದ್ದ ಮಿಚೆಲ್ ಮಾರ್ಷ್(1) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(1) ತಲಾ ಒಂದೊಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಾಲಂಗೋಚಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜಂಪಾರನ್ನು ಸ್ಯಾಮ್ ಕರನ್ ಪೆವಿಲಿಯನ್ ಹಾದಿ ತೋರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜಾನಿ ಬೇರ್‌ಸ್ಟೋವ್ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರೆ, ಜೇಸನ್ ರಾಯ್ 21 ರನ್‌ಗಳಿಸಿ ರನೌಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ರೂಟ್(39) ಹಾಗೂ ನಾಯಕ ಮಾರ್ಗನ್(42)ತಂಡಕ್ಕೆ ಆಸರೆಯಾದರು. ಬಿಲ್ಲಿಂಗ್ಸ್(8) ಹಾಗೂ ಬಟ್ಲರ್(3) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ.
ಕೊನೆಯಲ್ಲಿ ಕ್ರಿಸ್ ವೋಕ್ಸ್(26), ಟಾಮ್ ಕರನ್(37) ಹಾಗೂ ಆದಿಲ್ ರಶೀದ್(35) ಬ್ಯಾಟಿಂಗ್‌ನಲ್ಲಿ ಉಪಯುಕ್ತ ರನ್‌ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.