ಐಪಿಎಲ್ 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡಿದೆ. ಹಂಗಾಮಿ ನಾಯಕ ಜಿತೇಶ್ ಶರ್ಮಾ ಸೋಲಿನ ಬಗ್ಗೆ ಮತ್ತು ತಂಡದ ಕೊರತೆಗಳ ಬಗ್ಗೆ ಮಾತನಾಡಿದ್ದಾರೆ. ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಪಂದ್ಯಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿತು.

ಲಖನೌ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೆ ಇಲ್ಲಿನ ಏಕಾನ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಒಂದು ರೀತಿಯ ಔಪಚಾರಿಕ ಪಂದ್ಯ ಇದಾಗಿದ್ದರೂ, ಅಂಕಪಟ್ಟಿಯಲ್ಲಿ ಟಾಪ್-2ನೊಳಗೆ ಸ್ಥಾನ ಪಡೆಯಲು ಆರ್‌ಸಿಬಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿತ್ತು. ಆದರೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೀನಾಯ ಸೋಲು ಎದುರಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡವು ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಆರೆಂಜ್ ಅರ್ಮಿ ಎದುರು ಆರ್‌ಸಿಬಿ ತಂಡವನ್ನು ಮುನ್ನಡೆಸಿದ ಹಂಗಾಗಿ ನಾಯಕ ಜಿತೇಶ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಆರ್‌ಸಿಬಿ-ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜಿತೇಶ್ ಶರ್ಮಾ, 'ನನ್ನ ಪ್ರಕಾರ ನಾವು 20-30 ರನ್ ಹೆಚ್ಚಿಗೆ ಬಿಟ್ಟುಕೊಟ್ಟೆವು. ನಮ್ಮಲ್ಲಿ ಗೆಲುವಿಗಾಗಿ ಹೋರಾಟದ ತೀವ್ರತೆ ಈ ಪಂದ್ಯದಲ್ಲಿ ಕಂಡುಬರಲಿಲ್ಲ. ಆದರೆ ಸನ್‌ರೈಸರ್ಸ್‌ ಹೈದರಾಬಾದ್ ಎದುರಿನ ಪಂದ್ಯವನ್ನು ಸೋತಿದ್ದು ಒಂದು ರೀತಿ ಒಳ್ಳೆಯದ್ದೇ ಆಯಿತು. ಕೆಲವೊಮ್ಮೆ ಸೋಲುವುದು ಕೂಡಾ ಒಳ್ಳೆಯದ್ದು. ಯಾಕೆಂದರೆ ಈ ಸೋಲಿನಿಂದ ನಮ್ಮ ಕೊರತೆ ಏನು ಎನ್ನುವುದು ಇದರಿಂದ ಗೊತ್ತಾಗುತ್ತೆ. ನಾವು ಇದನ್ನು ವಿಮರ್ಶೆ ಮಾಡುತ್ತೇವೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

Scroll to load tweet…

ಇನ್ನು ಮಾತು ಮುಂದುವರೆಸಿದ ಜಿತೇಶ್ ಶರ್ಮಾ, 'ನಾನು ಔಟ್ ಆದ ರೀತಿ ಬಗ್ಗೆ ಬೇಜಾರಿದೆ. ಇನ್ನು ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಒಳ್ಳೆಯ ಸಂಗತಿ. ಮುಂಬರುವ ಪಂದ್ಯಗಳಲ್ಲಿ ನಾವು ಕಮ್‌ಬ್ಯಾಕ್ ಮಾಡುತ್ತೇವೆ ಎಂದು ಆರ್‌ಸಿಬಿ ಹಂಗಾಮಿ ನಾಯಕ ಜಿತೇಶ್ ಶರ್ಮಾ ಹೇಳಿದ್ದಾರೆ.

ಕೈಕೊಟ್ಟ ಮಧ್ಯಮ ಕ್ರಮಾಂಕ:

ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 232 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಆರ್‌ಸಿಬಿ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮೊದಲ 7 ಓವರ್‌ನಲ್ಲೇ 80 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸಿದರು. ದೇವದತ್ ಪಡಿಕ್ಕಲ್ ಬದಲು ಆರ್‌ಸಿಬಿ ತಂಡ ಕೂಡಿಕೊಂಡ ಮಯಾಂಕ್ ಅಗರ್‌ವಾಲ್ 11 ರನ್ ಗಳಿಸಿದರೆ, ರೊಮ್ಯಾರಿಯೋ ಶೆಫರ್ಡ್ ಖಾತೆಯನ್ನೇ ತೆರೆಯಲಿಲ್ಲ. ಇನ್ನು ಟಿಮ್ ಡೇವಿಡ್ ಒಂದು ಹಾಗೂ ಕೃನಾಲ್ ಪಾಂಡ್ಯ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ಆರ್‌ಸಿಬಿ ಸೋಲಿಗೆ ಕಾರಣ ಎನಿಸಿಕೊಂಡಿತು. ಆರ್‌ಸಿಬಿ ಕೊನೆಯ 7 ವಿಕೆಟ್ ಗಳನ್ನು ಕೇವಲ 22 ರನ್ ಅಂತರದಲ್ಲಿ ಕಳೆದುಕೊಂಡಿತು. ಸನ್‌ರೈಸರ್ಸ್ ಪರ ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಇಶಾನ್ ಕಿಶನ್;

ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಬಲಿಷ್ಠ ಆರ್‌ಸಿಬಿ ಎದುರು ಮೈಚಳಿಬಿಟ್ಟು ಆಡುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಅದರಲ್ಲೂ ಅಗ್ರಕ್ರಮಾಂಕದ ಬ್ಯಾಟರ್ ಇಶಾನ್ ಕಿಶನ್, ಕೇವಲ 48 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 94 ರನ್ ಸಿಡಿಸಿದರು. ಇದೇ ಕಾರಣಕ್ಕಾಗಿ ಇಶಾನ್ ಕಿಶನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.