ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕತ್ವ ಕಟ್ಟಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಹೃದಯ ಒಡೆದ ಎಮೋಜಿ ಪೋಸ್ಟ್ ಮಾಡಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮುಂಬೈ(ಡಿ.16): ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ತಂಡ ಕೂಡಿಕೊಳ್ಳುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಹೊಸ ತಲ್ಲಣಗಳೇ ಸೃಷ್ಟಿಯಾಗಿವೆ. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಗೂಢಾರ್ಥದ ಪೋಸ್ಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಹೌದು, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕತ್ವ ಕಟ್ಟಿದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಹೃದಯ ಒಡೆದ ಎಮೋಜಿ ಪೋಸ್ಟ್ ಮಾಡಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಶ್ವದ ನಂ.1 ಟಿ20 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಕಳೆದೆರಡು ಟಿ20 ಸರಣಿಯಲ್ಲಿ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ತವರಿನಲ್ಲಿ ಆಸೀಸ್ ಎದುರು 5 ಪಂದ್ಯಗಳ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯ ಭಾರತ ತಂಡದ ನಾಯಕರಾಗಿದ್ದರು. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸೂರ್ಯ ಮುಂಬೈ ತಂಡದ ಉಪನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಕೆಲ ಪಂದ್ಯಗಳ ಮಟ್ಟಿಗೆ ರೋಹಿತ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದಾಗ ಮುಂಬೈ ತಂಡವನ್ನು ಸೂರ್ಯ ಸಮರ್ಥವಾಗಿ ಮುನ್ನಡೆಸಿದ್ದರು.
ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ಪಾಳಯ ಕೂಡಿಕೊಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯ ಮೊದಲಿಗ ಆಟಗಾರನೇನಲ್ಲ. ಈ ಮೊದಲು ಪಾಂಡ್ಯ ಮುಂಬೈ ತಂಡ ಕೂಡಿಕೊಳ್ಳುತ್ತಿದ್ದಂತೆಯೇ ತಾರಾ ವೇಗಿ ಜಸ್ಪ್ರೀತ್ ಬುಮ್ರಾ ಸೋಷಿಯಲ್ ಮೀಡಿಯಾದಲ್ಲಿ "ಮೌನವೇ ಒಮ್ಮೊಮ್ಮೆ ಉತ್ತಮ ಉತ್ತರವಾಗಿರುತ್ತದೆ" ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಜಸ್ಪ್ರೀತ್ ಬುಮ್ರಾ, ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2015ರಿಂದಲೂ ಮುಂಬೈ ತಂಡದ ಮಾರಕ ವೇಗಿಯಾಗಿ ಗುರುತಿಸಿಕೊಂಡಿರುವ ಬುಮ್ರಾ, ಇದುವರೆಗೂ ಮುಂಬೈ ಇಂಡಿಯನ್ಸ್ ಪರ 145 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 2015, 2017, 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೋಹಿತ್ ಶರ್ಮಾ ಬಳಿಕ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ನಾಯಕನ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮುಂಬೈಗೆ ವಾಪಾಸ್ಸಾಗಿದ್ದರಿಂದಾಗಿ ಬುಮ್ರಾಗೆ ನಿರಾಸೆ ಎದುರಾಗಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.
