ಲಂಡನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಐದು ವಿಕೆಟ್‌ಗಳನ್ನು ಪಡೆದರು. ಬುಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನದಂದು ಜಸ್ಪ್ರೀತ್ ಬುಮ್ರಾ ಅವರ ಐದು ವಿಕೆಟ್‌ಗಳ ಅದ್ಭುತ ಬೌಲಿಂಗ್ ಪ್ರದರ್ಶನವು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಅನ್ನು 387 ರನ್‌ಗಳಿಗೆ ಕೊನೆಗೊಳಿಸಲು ಟೀಂ ಇಂಡಿಯಾಗೆ ಸಹಾಯ ಮಾಡಿತು. 251-4 ರಲ್ಲಿ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 271-7 ಕ್ಕೆ ಕುಸಿದಿತ್ತು, ಆದರೆ ಜೇಮಿ ಸ್ಮಿತ್ ಮತ್ತು ಬ್ರೇಡನ್ ಕಾರ್ಸ್ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ 387 ರನ್‌ಗಳನ್ನು ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಯಿತು.
ಎರಡನೇ ದಿನದಾಟದ ನಂತರ, ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಎಷ್ಟೇ ಚೆನ್ನಾಗಿ ಆಡಿದ್ರೂ ಜನ ಟೀಕೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಬುಮ್ರಾ ಉತ್ತರಿಸಲು ಪ್ರಾರಂಭಿಸಿದಾಗ, ಚಾನೆಲ್ ಮೈಕ್‌ಗಳ ಬಳಿ ಇಟ್ಟಿದ್ದ ವರದಿಗಾರರ ಫೋನ್ ರಿಂಗಾಯಿತು. ಇದನ್ನು ನೋಡಿದ ಬುಮ್ರಾ ಫೋನ್ ಸೈಲೆಂಟ್ ಮಾಡಿದ ನಂತರ, "ಯಾರೋ ಒಬ್ರ ಹೆಂಡತಿ ಫೋನ್ ಮಾಡ್ತಿದ್ದಾರೆ, ನಾನು ಅದನ್ನು ತೆಗೆದುಕೊಳ್ಳುತ್ತಿಲ್ಲ, ಪಕ್ಕಕ್ಕೆ ಇಡ್ತೀನಿ" ಎಂದು ಹೇಳಿ ಫೋನ್ ಪಕ್ಕಕ್ಕೆ ಇಟ್ಟರು.
ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನರ ಟೀಕೆಗಳ ಬಗ್ಗೆ ಕೇಳಿದಾಗ, 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್‌ರನ್ನೂ ಸಹ ಜನ ಟೀಕಿಸುತ್ತಾರೆ, ಭಾರತದ ಜೆರ್ಸಿ ಧರಿಸುವವರೆಗೂ ಪ್ರತಿದಿನವೂ ಇದು ಮುಂದುವರಿಯುತ್ತದೆ ಎಂದು ಬುಮ್ರಾ ಹೇಳಿದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಹದಿನೈದನೇ ಬಾರಿಗೆ ಮತ್ತು ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಬುಮ್ರಾ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಕ್ರಿಕೆಟ್ ಟೆಸ್ಟ್‌ನಲ್ಲೂ ಬುಮ್ರಾ ಐದು ವಿಕೆಟ್ ಪಡೆದಿದ್ದರು. ವಿದೇಶಗಳಲ್ಲಿ ಆಡಿದ 35 ಟೆಸ್ಟ್‌ಗಳಲ್ಲಿ ಹದಿಮೂರನೇ ಬಾರಿಗೆ ಬುಮ್ರಾ ಐದು ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ವಿದೇಶಗಳಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ ಎಂಬ ದಾಖಲೆಯನ್ನೂ ಬುಮ್ರಾ ತಮ್ಮದಾಗಿಸಿಕೊಂಡರು. 12 ಬಾರಿ ಐದು ವಿಕೆಟ್ ಪಡೆದ ದಂತಕಥೆ ಕಪಿಲ್ ದೇವ್ ಅವರನ್ನು ಬುಮ್ರಾ ಹಿಂದಿಕ್ಕಿದರು.
ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಒಳ್ಳೆಯ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್ ಎರಡನೇ ಓವರ್‌ನಲ್ಲೇ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಎರಡನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಕೆ ಎಲ್ ರಾಹುಲ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕರುಣ್ ನಾಯರ್ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು, ನಾಯಕ ಶುಭ್‌ಮನ್ ಗಿಲ್ ಬ್ಯಾಟಿಂಗ್ 16 ರನ್‌ಗೆ ಸೀಮಿತವಾಯಿತು.
ಇದೀಗ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಉಪನಾಯಕ ರಿಷಭ್ ಪಂತ್ ಮೂರನೇ ದಿನದಾಟದ ವೇಳೆಯಲ್ಲಿ ನಾಲ್ಕನೇ ವಿಕೆಟ್‌ಗೆ ಮುರಿಯದ 90 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 56 ಓವರ್ ಅಂತ್ಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿದ್ದು, ಇನ್ನೂ 190 ರನ್‌ಗಳ ಹಿನ್ನಡೆಯಲ್ಲಿದೆ. ಕೆ ಎಲ್ ರಾಹುಲ್ 76 ರನ್ ಹಾಗೂ ರಿಷಭ್ ಪಂತ್ 46 ರನ್ ಗಳಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ. ಈ ಜೊತೆಯಾಟ ಪಂದ್ಯದ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ.
