ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ 100 ವಿಕೆಟ್ ಗಡಿ ದಾಟಿದ ಜಸ್ಪ್ರೀತ್ ಬುಮ್ರಾ, ಟೆಸ್ಟ್, ಏಕದಿನ ಮತ್ತು ಟಿ20, ಹೀಗೆ ಮೂರೂ ಮಾದರಿಗಳಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.  

ಕಟಕ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 101 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಬೇರೆ ಯಾವ ಭಾರತೀಯ ಬೌಲರ್‌ ಮಾಡದ ಅಪರೂಪದ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆದ ಬುಮ್ರಾ, ಇದೀಗ ಟೆಸ್ಟ್, ಏಕದಿನ ಮತ್ತು ಟಿ20ಯಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನ್ನುವ ಅಪರೂಪದಲ್ಲೇ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯಕ್ಕೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾಗೆ 100 ವಿಕೆಟ್ ಪೂರೈಸಲು ಕೇವಲ ಒಂದು ವಿಕೆಟ್ ಬೇಕಿತ್ತು.

ಅಪರೂಪದ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಆರಂಭಿಕ ಸ್ಪೆಲ್‌ನಲ್ಲಿ ಬುಮ್ರಾಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮಾರ್ಕ್‌ರಮ್ ನೀಡಿದ ಕ್ಯಾಚ್ ಅನ್ನು ಬೌಂಡರಿಯಲ್ಲಿ ಶಿವಂ ದುಬೆ ಹಿಡಿದರೂ, ನಿಯಂತ್ರಣ ತಪ್ಪಿ ಬೌಂಡರಿ ಹೊರಗೆ ಹೋದ ಕಾರಣ ಅದು ಸಿಕ್ಸರ್ ಆಯಿತು. ಬುಮ್ರಾ ಎರಡನೇ ಓವರ್‌ನಲ್ಲಿ ಮಾರ್ಕ್‌ರಮ್ ಬೌಂಡರಿ ಮತ್ತು ಸಿಕ್ಸ್ ಬಾರಿಸಿದ್ದರಿಂದ, ನಾಯಕ ಸೂರ್ಯಕುಮಾರ್ ಯಾದವ್ ಬುಮ್ರಾ ಅವರ ಮೊದಲ ಸ್ಪೆಲ್ ಅನ್ನು ನಿಲ್ಲಿಸಿದರು. ನಂತರ, ದಕ್ಷಿಣ ಆಫ್ರಿಕಾ 10 ಓವರ್‌ಗಳಲ್ಲಿ 68-6 ಕ್ಕೆ ಬ್ಯಾಟಿಂಗ್ ಕುಸಿತ ಕಂಡಾಗ ಬುಮ್ರಾ ಎರಡನೇ ಸ್ಪೆಲ್‌ಗೆ ಬಂದರು. ಎರಡನೇ ಎಸೆತದಲ್ಲೇ ದಕ್ಷಿಣ ಆಫ್ರಿಕಾದ ಟಾಪ್ ಸ್ಕೋರರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡಿ ಬುಮ್ರಾ 100 ವಿಕೆಟ್‌ಗಳ ಗಡಿ ದಾಟಿದರು. ಇದರೊಂದಿಗೆ ಮೂರೂ ಮಾದರಿಗಳಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆದರು. ಬುಮ್ರಾ ಎಸೆತ ನೋ ಬಾಲ್ ಆಗಿತ್ತೇ ಎಂಬ ಅನುಮಾನವಿತ್ತಾದರೂ, ರಿಪ್ಲೇ ಪರಿಶೀಲಿಸಿದ ಟಿವಿ ಅಂಪೈರ್ ಅದನ್ನು ನೋ ಬಾಲ್ ಎಂದು ಕರೆಯಲಿಲ್ಲ.

Scroll to load tweet…

ಭಾರತದ ಮೊದಲ ಹಾಗೂ ವಿಶ್ವದ ಐದನೇ ಬೌಲರ್ ಬುಮ್ರಾ

ವಿಶ್ವ ಕ್ರಿಕೆಟ್‌ನಲ್ಲಿ ಮೂರೂ ಮಾದರಿಗಳಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಹಾಗೂ ಒಟ್ಟಾರೆ ಐದನೇ ಬೌಲರ್ ಬುಮ್ರಾ. ಶ್ರೀಲಂಕಾದ ಲಸಿತ್ ಮಾಲಿಂಗ, ನ್ಯೂಜಿಲೆಂಡ್‌ನ ಟಿಮ್ ಸೌಥಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ ಬುಮ್ರಾಗಿಂತ ಮೊದಲು ಈ ಸಾಧನೆ ಮಾಡಿದವರು. ಅದೇ ಓವರ್‌ನ ಐದನೇ ಎಸೆತದಲ್ಲಿ ಕೇಶವ್ ಮಹಾರಾಜ್ ಅವರನ್ನು ಔಟ್ ಮಾಡಿ ಬುಮ್ರಾ ಪಂದ್ಯದ ಎರಡನೇ ವಿಕೆಟ್ ಪಡೆದರು. ನಂತರ ದಕ್ಷಿಣ ಆಫ್ರಿಕಾ ಆಲೌಟ್ ಆದ ಕಾರಣ ಬುಮ್ರಾಗೆ ನಾಲ್ಕನೇ ಓವರ್ ಬೌಲ್ ಮಾಡಬೇಕಾಗಿ ಬರಲಿಲ್ಲ.

ಸದ್ಯ 81 ಟಿ20 ಪಂದ್ಯಗಳಿಂದ ಬುಮ್ರಾ 101 ವಿಕೆಟ್ ಪಡೆದಿದ್ದಾರೆ. 7 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ. 69 ಪಂದ್ಯಗಳಲ್ಲಿ 107 ವಿಕೆಟ್ ಪಡೆದಿರುವ ಅರ್ಷದೀಪ್ ಸಿಂಗ್ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Scroll to load tweet…

ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಭಾರತದ ನಂಬಿಗಸ್ಥ ವೇಗಿಯಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಟೆಸ್ಟ್‌ನಲ್ಲಿ 234, ಏಕದಿನ ಕ್ರಿಕೆಟ್‌ನಲ್ಲಿ 149 ಹಾಗೂ ಟಿ20 ಕ್ರಿಕೆಟ್‌ನಲ್ಲಿ 101 ವಿಕೆಟ್ ಕಬಳಿಸಿ ಮುನ್ನುಗ್ಗುತ್ತಿದ್ದಾರೆ.