ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಜಸ್ಪ್ರೀತ್ ಬುಮ್ರಾಶುಕ್ರವಾರದಿಂದಲೇ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ಬುಮ್ರಾ2022ರ ಸೆಪ್ಟೆಂಬರ್‌ನಿಂದಲೂ ಕ್ರಿಕೆಟ್‌ನಿಂದ ದೂರ ಉಳಿದಿರುವ ವೇಗಿ

ಬೆಂಗಳೂರು(ಏ.15): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ, 2022ರ ಸೆಪ್ಟೆಂಬರ್‌ನಿಂದೀಚೆಗೆ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಬುಮ್ರಾ ಮತ್ತೆ ಯಾವಾಗ ಭಾರತ ಕ್ರಿಕೆಟ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಕುರಿತಂತೆ ಬಿಸಿಸಿಐ ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಬಲಗೈ ವೇಗಿ ಬುಮ್ರಾ, ಕಳೆದ ವರ್ಷದಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದಾದ ಬಳಿಕ ಕೆಲ ತಿಂಗಳ ಹಿಂದಷ್ಟೇ ಬುಮ್ರಾ, ನ್ಯೂಜಿಲೆಂಡ್‌ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದೀಗ ಬುಮ್ರಾ, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಭಾರತ ಕ್ರಿಕೆಟ್‌ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. 

ಬೆನ್ನು ನೋವಿನ ಸಮಸ್ಯೆಯಿಂದಾಗಿಯೇ ಜಸ್ಪ್ರೀತ್ ಬುಮ್ರಾ, ಕಳೆದ ವರ್ಷ ನಡೆದ ಏಷ್ಯಾಕಪ್‌ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಶ್ರೀಲಂಕಾ ಎದುರಿನ ಏಕದಿನ ಸರಣಿಗೆ ಬುಮ್ರಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತಾದರೂ, ಇದಾದ ಬಳಿಕ ಅವರನ್ನು ಫಿಟ್ನೆಸ್ ಕಾರಣದಿಂದಾಗಿಯೇ ತಂಡದಿಂದ ಕೈಬಿಡಲಾಯಿತು. ಸದ್ಯ ಹಾಲಿ ನಡೆಯುತ್ತಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಆಸ್ಟ್ರೇಲಿಯಾ ಎದುರು ಜೂನ್‌ 05ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಸೆಣಸಾಟದಿಂದಲೂ ಬುಮ್ರಾ ಹೊರಗುಳಿದಿದ್ದಾರೆ. ಆದರೆ ಬುಮ್ರಾ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗಿ ಭಾರತ ಪರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

IPL 2023: ಆರ್‌ಸಿಬಿ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಕನ್ನಡಿಗ ಪಾದಾರ್ಪಣೆ.!

ಜಸ್ಪ್ರೀತ್ ಬುಮ್ರಾ ಅವರಿಗೆ ಆರು ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯ ಮ್ಯಾನೇಜ್‌ಮೆಂಟ್‌ ಶಿಫಾರಸು ಮಾಡಿದೆ. ಹೀಗಾಗಿ ಬೆಂಗಳೂರಿನ ಎನ್‌ಸಿಎದಲ್ಲಿ ಜಸ್ಪ್ರೀತ್ ಬುಮ್ರಾ ಏಪ್ರಿಲ್ 14ರಿಂದ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Scroll to load tweet…

ಜಸ್ಪ್ರೀತ್ ಬುಮ್ರಾ, ನ್ಯೂಜಿಲೆಂಡ್‌ನಲ್ಲಿ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಅವರಿಗೆ ಯಾವುದೇ ನೋವಿನ ಸಮಸ್ಯೆ ಬಾಧಿಸುತ್ತಿಲ್ಲ. ಆರು ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಎನ್‌ಸಿಎ ತಜ್ಞರು ಶಿಫಾರಸು ಮಾಡಿದ್ದಾರೆ. ಶುಕ್ರವಾರದಿಂದಲೇ ಜಸ್ಪ್ರೀತ್ ಬುಮ್ರಾ, ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಶ್ರೇಯಸ್‌ ಅಯ್ಯರ್, ಮುಂದಿನ ವಾರ ಸೊಂಟ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದಾದ ಬಳಿಕ ಎರಡು ವಾರಗಳ ಕಾಲ ಸರ್ಜನ್‌ಗಳ ನಿಗಾದಲ್ಲಿರಲಿದ್ದು, ಇದಾದ ಬಳಿಕ ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.