* ಐಪಿಎಲ್‌ನಲ್ಲಿ ಕನ್ನಡಿಗ ಜಗದೀಶ್ ಸುಚಿತ್ ಮಿಂಚಿನ ಪ್ರದರ್ಶನ* ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ವಿಕೆಟ್‌ ಕಬಳಿಸಿದ ಸುಚಿತ್* ದಶಕದ ಬಳಿಕ ಮೊದಲ ಓವರ್‌ನ ಮೊದಲ ವಿಕೆಟ್ ಕಬಳಿಸಿದ ಸ್ಪಿನ್ನರ್ ಎನ್ನುವ ಶ್ರೇಯ ಸುಚಿತ್ ಪಾಲು

ಮುಂಬೈ(ಮೇ.08): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 54ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕನ್ನಡಿಗ ಜಗದೀಶ್ ಸುಚಿತ್ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಶಾಕ್ ನೀಡಿದ್ದಾರೆ. ಮೊದಲ ಎಸೆತದಲ್ಲೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಬಲಿ ಪಡೆಯುವ ಮೂಲಕ ಆರ್‌ಸಿಬಿಗೆ ಬಿಗ್‌ ಶಾಕ್ ನೀಡಿದ್ದಾರೆ. ಈ ಮೂಲಕ ದಶಕದ ಬಳಿಕ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ.

ಹೌದು, ಐಪಿಎಲ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಬಳಿಸಿದ ಮೂರನೇ ಬೌಲರ್‌ ಎನ್ನುವ ಕೀರ್ತಿಗೆ ಜಗದೀಶ ಸುಚಿತ್ ಪಾತ್ರರಾಗಿದ್ದಾರೆ. ಈ ಮೊದಲು ಡರ್ಬನ್‌ನಲ್ಲಿ(2009) ಕೆವಿನ್ ಪೀಟರ್‌ಸನ್‌ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ 2012ರಲ್ಲಿ ಮರ್ಲಾನ್ ಸ್ಯಾಮುಯಲ್ಸ್‌ ಕಟಕ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ ಕಬಳಿಸಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸ್ಪಿನ್ನರ್‌ ವಿಕೆಟ್‌ ಕಬಳಿಸಲು ಯಶಸ್ವಿಯಾಗಿರಲಿಲ್ಲ. ಆದರೆ ಇದೀಗ ಕನ್ನಡಿಗ ಜೆ ಸುಚಿತ್‌ ಐಪಿಎಲ್‌ನಲ್ಲಿ 10 ವರ್ಷಗಳ ಬಳಿಕ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಬೌಲರ್‌ ಎನಿಸಿದ್ದಾರೆ. 

ಐಪಿಎಲ್‌ನಲ್ಲಿ ಆರನೇ ಬಾರಿಗೆ ಶೂನ್ಯ ಸುತ್ತಿದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಪಿಎಲ್‌ ಇತಿಹಾಸದಲ್ಲಿ ಆರನೇ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲೇ ವಿರಾಟ್ ಕೊಹ್ಲಿ ಇದೀಗ ಮೂರನೇ ಬಾರಿಗೆ ಶೂನ್ಯ ಸುತ್ತಿದ್ದಾರೆ. 2008ರಲ್ಲಿ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್‌ ಎದುರು ಮೊದಲ ಬಾರಿಗೆ ಶೂನ್ಯ ಸುತ್ತಿದ್ದರು. ಇದಾದ ಬಳಿಕ 2014ರಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಹಾಗೂ 2017ರಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಎದುರು ಮೊದಲ ಎಸೆತದಲ್ಲೇ ಗೋಲ್ಡನ್ ಡಕ್‌ ಆಗಿ ಪೆವಿಲಿಯನ್ ಸೇರಿದ್ದರು. ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೇ ವಿರಾಟ್ ಕೊಹ್ಲಿ ಮೂರು ಬಾರಿ ಶೂನ್ಯ ಸುತ್ತಿದ್ದಾರೆ. ಲಖನೌ ಸೂಪರ್ ಜೈಂಟ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ಎದುರು ಎರಡು ಬಾರಿ ಹೀಗೆ ಒಟ್ಟು ಮೂರು ಬಾರಿ ಕೊಹ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. 

IPL 2022: ಸನ್‌ರೈಸರ್ಸ್‌ ಹೈದರಾಬಾದ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. ಇದುವರೆಗೂ ವಿರಾಟ್ ಕೊಹ್ಲಿ 12 ಐಪಿಎಲ್ ಪಂದ್ಯಗಳನ್ನಾಡಿದ್ದು 19.63 ರ ಬ್ಯಾಟಿಂಗ್ ಸರಾಸರಿಯಲ್ಲಿ 216 ರನ್ ಬಾರಿಸಿದ್ದಾರೆ.