ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಜುಲೈ 12ರಿಂದ ಆರಂಭಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಮೂವರು ಸ್ಟಾರ್ ಕ್ರಿಕೆಟಿಗರು ರೆಡಿವಿಂಡೀಸ್ ಎದುರು ಶುಭಾರಂಭ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಡೊಮಿನಿಕಾ(ಜು.11): ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಬುಧವಾರದಿಂದ ಆರಂಭಗೊಳ್ಳಲಿದ್ದು, ಯುವ ತಾರೆಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಇಶಾನ್ ಕಿಶನ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಈ ಇಬ್ಬರು ತಾರಾ ಬ್ಯಾಟರ್‌ಗಳು ಇದೀಗ ರೆಡ್ ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಸೋತ ಬಳಿಕ ಕೆಲ ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡಲಾಗಿದ್ದು, ಕಿರಿಯರಿಗೆ ಮಣೆ ಹಾಕಲಾಗಿದೆ. ಈ ಪೈಕಿ ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್ ಪಂದ್ಯ ಆಡುವುದು ಬಹುತೇಕ ಖಚಿತವಾಗಿದೆ. ಅವರು ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಶುಭ್‌ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು, ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಪೈಪೋಟಿ ಇದೆ. ಕೆ.ಎಸ್.ಭರತ್ ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ಅವರ ಪ್ರದರ್ಶನ ಚೆನ್ನಾಗಿಲ್ಲ. ಹೀಗಾಗಿ ಇಶಾನ್ ಕಿಶನ್‌ಗೆ ಚೊಚ್ಚಲ ಅವಕಾಶ ಸಿಗುವ ಸಾಧ್ಯತೆಗಳಿವೆ.
ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಬೇಕಿದ್ದರೇ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಜವಾಬ್ದಾರಿಯುತ ಆಟವಾಡಬೇಕಿದೆ. ಚೇತೇಶ್ವರ್ ಪೂಜಾರ ಅನುಪಸ್ಥಿತಿಯಲ್ಲಿ ಈ ಮೂವರು ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ಳಬೇಕಾದ ಮಹತ್ವದ ಜವಾಬ್ದಾರಿ ಮಾರಕ ವೇಗಿ ಮೊಹಮ್ಮದ್ ಸಿರಾಜ್ ಮೇಲಿದೆ.
ಕೋಚ್ ರಾಹುಲ್ ದ್ರಾವಿಡ್ ಜತೆ ವಿರಾಟ್ ಕೊಹ್ಲಿ ವಿಶೇಷ ಪೋಸ್ಟ್..! ಆ ದಿನಗಳನ್ನು ನೆನಪಿಸಿಕೊಂಡ ವಿರಾಟ್..!
3ನೇ ವೇಗಿ ಸ್ಥಾನಕ್ಕೆ ಪೈಪೋಟಿ: ಇದೇ ವೇಳೆ ತಂಡದಲ್ಲಿ 3ನೇ ವೇಗಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಮೊಹಮದ್ ಸಿರಾಜ್ ಜೊತೆ ಜಯದೇವ್ ಉನಾದ್ಕಟ್ ಆಡುವ ಸಾಧ್ಯತೆಯಿದ್ದು, 3ನೇ ಸ್ಥಾನಕ್ಕೆ ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ನಡುವೆ ಪೈಪೋಟಿಯಿದೆ. ಹೆಚ್ಚುವರಿ ಸ್ಪಿನ್ನರ್ ಆಡಿದರೆ ವೇಗಿಗಳನ್ನೇ ಕಣಕ್ಕಿಳಿಸಲು ನಿರ್ಧರಿಸಿದರೆ ಶಾರ್ದೂಲ್‌ಗೆ ಅವಕಾಶ ಸಿಗಬಹುದು.
ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ. ಇನ್ನು ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.
ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ ಹೀಗಿದೆ:
ಕ್ರೆಗ್ ಬ್ರಾಥ್‌ವೇಟ್(ನಾಯಕ), ಜೆರ್ಮೈನ್ ಬ್ಲಾಕ್‌ವುಡ್(ಉಪನಾಯಕ), ಎಲಿಕ್ ಅಥಂಜೆ, ಜೋಮೆಲ್ ವಾರ್ವಿಕನ್, ತೇಗ್‌ನಾರಾಯಣ್ ಚಂದ್ರಪಾಲ್, ರಾಕೀಂ ಕಾರ್ನ್‌ವಾಲ್, ಜೋಶ್ವಾ ಡಿ ಸಿಲ್ವಾ, ಶೆನೊನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜರಿ ಜೋಸೆಫ್, ರೈಮನ್ ರೀಫರ್, ಕೀಮರ್ ರೋಚ್, ಜೊಮೆಲ್ ವಾರ್ರಿಕನ್.
