Asianet Suvarna News Asianet Suvarna News

ರೆಸ್ಟ್‌ ಬೇಕೆಂದು ಕಾರಣ ಹೇಳಿ ದುಬೈನಲ್ಲಿ ಪಾರ್ಟಿ ಮಾಡಿದ ಇಶಾನ್ ಕಿಶನ್‌ಗೆ BCCI ಶಾಕ್!

ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಬೇಕೆಂದು ಕಾರಣ ಹೇಳಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ದೂರ ಉಳಿದಿದ್ದ ಇಶಾನ್‌ ಕಿಶನ್‌, ಬಳಿಕ ದುಬೈನಲ್ಲಿ ಎಂ.ಎಸ್‌.ಧೋನಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಟಿವಿ ಶೋಗಳಲ್ಲೂ ಕೂಡಾ ಭಾಗಿಯಾಗಿದ್ದರು

Ishan Kishan Shreyas Iyer not selected for Afghanistan T20Is on disciplinary ground Says report kvn
Author
First Published Jan 11, 2024, 10:40 AM IST

ನವದೆಹಲಿ(ಜ.11): ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಶ್ರೇಯಸ್ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಆಯ್ಕೆಯಾಗದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಶಿಸ್ತಿನ ಕಾರಣಕ್ಕಾಗಿ ಇವರಿಬ್ಬರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಬೇಕೆಂದು ಕಾರಣ ಹೇಳಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ದೂರ ಉಳಿದಿದ್ದ ಇಶಾನ್‌ ಕಿಶನ್‌, ಬಳಿಕ ದುಬೈನಲ್ಲಿ ಎಂ.ಎಸ್‌.ಧೋನಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಟಿವಿ ಶೋಗಳಲ್ಲೂ ಕೂಡಾ ಭಾಗಿಯಾಗಿದ್ದರು. ಅವರ ಈ ನಡೆ ಬಿಸಿಸಿಐಗೆ ಸರಿ ಕಾಣಲಿಲ್ಲ. ‘ಕಿಶನ್‌ ನಂಬಿಕೆಗೆ ಅರ್ಹರಲ್ಲ. ಕ್ರಿಕೆಟ್‌ನಿಂದ ದೂರ ಉಳಿಯಲು ಕೊಟ್ಟ ಕಾರಣವೇ ಬೇರೆ, ಮಾಡಿದ್ದೇ ಬೇರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ. ಅವರ ಈ ನಡೆ, ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲೂ ಅವರಿಗೆ ಜಾಗ ಸಿಗದಂತೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇಂದಿನಿಂದ ಭಾರತ vs ಆಫ್ಘನ್‌ ಟಿ20 ಸರಣಿ ಆರಂಭ..!

ಇನ್ನು, ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ತಂಡದ ಅವಶ್ಯಕತೆಗೆ ತಕ್ಕಂತೆ ಆಡಲು ವಿಫಲರಾಗಿದ್ದ ಶ್ರೇಯಸ್‌ಗೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ರಣಜಿ ಟ್ರೋಫಿಯಲ್ಲಿ ಆಡಲು ಸೂಚಿಸಿದ್ದರಂತೆ. ಶ್ರೇಯಸ್‌ ಆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದಾಗ ಸಿಟ್ಟಾದ ಅಗರ್ಕರ್‌, ಆಫ್ಘನ್‌ ಸರಣಿಗೆ ಶ್ರೇಯಸ್‌ರನ್ನು ಆಯ್ಕೆ ಮಾಡಲಿಲ್ಲ. ಆ ಬಳಿಕವಷ್ಟೇ ರಣಜಿ ಪಂದ್ಯವಾಡಲು ಶ್ರೇಯಸ್‌ ಒಪ್ಪಿದರು ಎನ್ನಲಾಗಿದೆ.

ವರದಿ ಸುಳ್ಳು: ದ್ರಾವಿಡ್‌ಇಶಾನ್‌ ಕಿಶನ್‌ ಮತ್ತು ಶ್ರೇಯಸ್ ಅಯ್ಯರ್‌ ವಿರುದ್ಧದ ಅಶಿಸ್ತಿನ ಕ್ರಮವನ್ನು ಕೋಚ್‌ ರಾಹುಲ್ ದ್ರಾವಿಡ್‌ ಅಲ್ಲಗಳೆದಿದ್ದು, ಅವರ ಬೇಡಿಕೆಗೆ ನಾವು ಸ್ಪಂದಿಸಿದ್ದೇವೆ. ಸ್ವಂತ ನಿರ್ಧಾರದಂತೆ ಅವರು ಹೊರಗುಳಿದಿದ್ದಾರೆ. ಯಾವುದೇ ಶಿಸ್ತಿನ ಕ್ರಮವಲ್ಲ ಎಂದಿದ್ದಾರೆ.

ಟೆಸ್ಟ್‌ ರ್‍ಯಾಂಕಿಂಗ್‌: 6ನೇ ಸ್ಥಾನಕ್ಕೇರಿದ ವಿರಾಟ್‌!

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಏರಿಕೆ ಕಂಡು 6ನೇ ಸ್ಥಾನ ತಲುಪಿದ್ದಾರೆ. ಇನ್ನು ನಾಯಕ ರೋಹಿತ್‌ ಶರ್ಮಾ ಅಗ್ರ-10ರ ಪಟ್ಟಿಗೆ ಪ್ರವೇಶಿಸಿದ್ದು, 4 ಸ್ಥಾನಗಳ ಏರಿಕೆಯೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅಗ್ರಸ್ಥಾನ ಕಾಯ್ದುಕೊಂಡರೆ, ಜಸ್‌ಪ್ರೀತ್‌ ಬೂಮ್ರಾ ಒಂದು ಸ್ಥಾನ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ. 13 ಸ್ಥಾನ ಜಿಗಿದಿರುವ ಮೊಹಮದ್‌ ಸಿರಾಜ್‌, 17ನೇ ಸ್ಥಾನದಲ್ಲಿದ್ದಾರೆ.

ICC ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾಗೆ ಲಾಸ್ಟ್‌ ಚಾನ್ಸ್..!

ಇಂಗ್ಲೆಂಡ್‌ ವಿರುದ್ಧದ ಮೊದಲ ಎರಡು ಟೆಸ್ಟ್‌ಗೆ ಶಮಿ ಗೈರು?

ನವದೆಹಲಿ: ಜ.25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತದ ಪ್ರಮುಖ ವೇಗಿ ಮೊಹಮದ್ ಶಮಿ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 33 ವರ್ಷದ ಶಮಿ ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರು ಇನ್ನಷ್ಟೇ ಎನ್‌ಸಿಎಗೆ ತೆರಳಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದೆ. ಈ ವರೆಗೂ ಬೌಲಿಂಗ್‌ ಅಭ್ಯಾಸ ಆರಂಭಿಸ ಕಾರಣ ಸರಣಿಯ ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಸರಣಿ ತವರಿನಲ್ಲಿ ನಡೆಯಲಿದ್ದು, ಬೂಮ್ರಾ, ಸಿರಾಜ್‌ ಕೂಡಾ ಆಯ್ಕೆಗೆ ಲಭ್ಯರಿದ್ದಾರೆ. ಅಲ್ಲದೆ ಸ್ಪಿನ್ನರ್‌ಗಳೂ ಪ್ರಮುಖ ಪಾತ್ರ ವಹಿಸಲಿರುವ ಕಾರಣ ಶಮಿಯನ್ನು ಆಡಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.
 

Follow Us:
Download App:
  • android
  • ios