Asianet Suvarna News Asianet Suvarna News

ರಾಷ್ಟ್ರಗೀತೆ ಹಾಡುವ ವೇಳೆ ಇಶಾನ್ ಕಿಶನ್ ಮೇಲೆ ಕೀಟ ದಾಳಿ..! ವಿಡಿಯೋ ವೈರಲ್

ಜಿಂಬಾಬ್ವೆ ಎದುರು ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ರಾಷ್ಟ್ರಗೀತೆ ಹಾಡುವ ವೇಳೆ ಇಶಾನ್ ಕಿಶನ್‌ಗೆ ಕಾಟ ಕೊಟ್ಟ ಕೀಟ
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಶುಭಾರಂಭ

Ishan Kishan Reaction To Insect Attack During 1st India vs Zimbabwe ODI video viral kvn
Author
Bengaluru, First Published Aug 19, 2022, 11:37 AM IST

ಹರಾರೆ(ಆ.19): ಕೆ ಎಲ್ ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡವು, ಜಿಂಬಾಬ್ವೆ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಹರಾರೆ ಸ್ಪೋರ್ಟ್ಸ್‌ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ, ಸುಲಭ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ಜಿಂಬಾಬ್ವೆ ತಂಡವು, ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 40.3 ಓವರ್‌ಗಳಲ್ಲಿ 189 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ 30.5 ಓವರ್‌ಗಳಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿತು. ಶಿಖರ್ ಧವನ್ ಅಜೇಯ 81 ರನ್ ಬಾರಿಸಿದರೇ, ಶುಭ್‌ಮನ್ ಗಿಲ್ 82 ರನ್ ಸಿಡಿಸಿ ಅಜೇಯರಾಗುಳಿದರು.

ಇನ್ನು ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ತಮಾಷೆಯ ಒಂದು ಘಟನೆ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ. ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಎರಡು ತಂಡದ ಆಟಗಾರರು ಮೈದಾನಕ್ಕಿಳಿದು ಸಾಲಾಗಿ ನಿಂತ ಬಳಿಕ ತಮ್ಮ ತಮ್ಮ ದೇಶಗಳ ರಾಷ್ಟ್ರಗೀತೆ ನುಡಿಸುವ ವೇಳೆ, ಕೀಟವೊಂದು ದಿಢೀರ್ ಎನ್ನುವಂತೆ ಹಾರಿಬಂದು ರಾಷ್ಟ್ರಗೀತೆ ಹಾಡುತ್ತಿದ್ದ ಇಶಾನ್ ಕಿಶನ್‌ ಅವರಿಗೆ ಕಚ್ಚಿದೆ. ಇಶಾನ್ ಕಿಶನ್ ತಕ್ಷಣವೇ ಗಲಿಬಿಲಿಯಾದಂತೆ ಕಂಡು ಬಂದಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೊದಲ ಪಂದ್ಯದ ವಿಚಾರಕ್ಕೆ ಬರುವುದಾದರೇ, ಭಾರತೀಯ ಆರಂಭಿಕ ಜೋಡಿಯನ್ನು ಕಟ್ಟಿಹಾಕಲು ಜಿಂಬಾಬ್ವೆ ನಾಯಕ 8 ಬೌಲರ್‌ಗಳನ್ನು ಬಳಸಿದರೂ ಕೂಡಾ ಯಶಸ್ವಿಯಾಗಲಿಲ್ಲ. ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ಜೋಡಿ ಒಂದು ಸಿಕ್ಸರ್ ಹಾಗೂ 19 ಬೌಂಡರಿ ಸಿಡಿಸುವ ಮೂಲಕ ಸುಲಭವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ಬ್ಯಾಟಿಂಗ್‌ನಲ್ಲಿ ಉಪಯುಕ್ತ ರನ್ ಕಾಣಿಕೆ ನೀಡಿದ್ದ ಗರಾವ, ಬೌಲಿಂಗ್‌ನಲ್ಲಿ ದುಬಾರಿಯಾದರು. 7 ಓವರ್‌ ಬೌಲಿಂಗ್ ಮಾಡಿದ ಗರಾವ 40 ರನ್ ಬಿಟ್ಟುಕೊಟ್ಟರು. 

Ind vs ZIM: ಜಿಂಬಾಬ್ವೆಯನ್ನು ಅನಾಯಾಸವಾಗಿ ಬಗ್ಗುಬಡಿದ ಟೀಂ ಇಂಡಿಯಾ, ಮೀಮ್ಸ್ ವೈರಲ್‌

ಸದ್ಯ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ 3ನೇ ಸ್ಥಾನದಲ್ಲಿದ್ದರೇ, ಜಿಂಬಾಬ್ವೆ ತಂಡವು 10ನೇ ಸ್ಥಾನದಲ್ಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಅವರಂತಹ ತಾರಾ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನು ಟೀಂ ಇಂಡಿಯಾ ಹೆಡ್‌ ಕೋಚ್ ಕೂಡಾ ವಿಶ್ರಾಂತಿ ಪಡೆದಿದ್ದು, ಅವರ ಬದಲಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಹಂಗಾಮಿ ಹೆಡ್ ಕೋಚ್ ಆಗಿ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ಜತೆ ತೆರಳಿದ್ದಾರೆ.

Follow Us:
Download App:
  • android
  • ios