ಡುಬ್ಲಿನ್(ಆ.29): ಐರ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆವಿನ್ ಒ'ಬ್ರಿಯಾನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮೈದಾನದ ಎಲ್ಲಾ ಮೂಲೆ ಮೂಲೆಗಳಿಗೆ ಚೆಂಡನ್ನು ಬಾರಿಸುವ ಕ್ಷಮತೆ ಹೊಂದಿದ್ದಾರೆ. ತಮ್ಮ ಏಕಾಂಗಿ ಹೋರಾಟದ ಮೂಲಕ ಹಲವಾರು ಬಾರಿ ಐರ್ಲೆಂಡ್ ತಂಡಕ್ಕೆ ಸ್ಮರಣೀಯ ಹಾಗೂ ವಿರೋಚಿತ ಗೆಲುವುಗಳನ್ನು ತಂದು ಕೊಟ್ಟಿದ್ದಾರೆ. 

ಇದೀಗ ಕೆವಿನ್ ಒ'ಬ್ರಿಯಾನ್ ಸಿಕ್ಸರ್‌ ಸಿಡಿಸಿ ತಮ್ಮದೇ ಕಾರಿನ ಗಾಜು ಪುಡಿಮಾಡಿಕೊಂಡು ಸುದ್ದಿಯಾಗಿದ್ದಾರೆ. ಹೌದು, ದೇಸಿ ಟಿ20 ಟೂರ್ನಿಯೊಂದರಲ್ಲಿ ಲೈನ್ಸ್ಟರ್‌ ಲೈಟ್ನಿಂಗ್ ಪರ ಮಿಂಚಿನ ಬ್ಯಾಟಿಂಗ್ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ. ಕೇವಲ 37 ಎಸೆತಗಳಲ್ಲಿ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಕೆವಿನ್ ಕೆವಿನ್ ಒ'ಬ್ರಿಯಾನ್ 82 ರನ್ ಚಚ್ಚಿದ್ದರು. ನಾರ್ಥ್ ವೆಸ್ಟ್ ವಾರಿಯರ್ಸ್ ಬೌಲರ್‌ಗಳನ್ನು ಕೆವಿನ್ ಒ'ಬ್ರಿಯಾನ್ ಮನಬಂದಂತೆ ದಂಡಿಸಿದ್ದಾರೆ. ಈ ವೇಳೆ ಕೆವಿನ್ ಒ'ಬ್ರಿಯಾನ್ ಬಾರಿಸಿದ ಸಿಕ್ಸ್‌ವೊಂದು ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಲ್ಲಿಗೆ ಬಂದು ಬಡಿದಿದೆ. ಪರಿಣಾಮ ಕಾರಿನ ಗಾಜು ಚೆಲ್ಲಾಪಿಲ್ಲಿಯಾಗಿ ಒಡೆದು ಹೋಗಿದೆ.

CSK ಗೆ ಬಿಗ್‌ ಶಾಕ್: IPL 2020 ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಔಟ್..!

ಕೆವಿನ್ ಒ'ಬ್ರಿಯಾನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಲೈನ್ಸ್ಟರ್ ಲೈಟ್ನಿಂಗ್ ತಂಡ ಸುಲಭ ಜಯ ದಾಖಲಿಸಿದೆ. ಇದೀಗ ಐರ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೆವಿನ್ ಒ'ಬ್ರಿಯಾನ್ ಕಾರಿನ ಗಾಜು ಛಿದ್ರ ಛಿದ್ರವಾಗಿರುವುದನ್ನು ಶೇರ್ ಮಾಡಿದೆ.

ಟಿ20 ಪಂದ್ಯವಾಗಿದ್ದರು, ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು 12 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲೈಟ್ನಿಂಗ್ ತಂಡ ಕೆವಿನ್ ಒ'ಬ್ರಿಯಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಎದುರಾಳಿ ತಂಡ 4 ವಿಕೆಟ್ ಕಳೆದುಕೊಂಡು 104 ರನ್‌ ಬಾರಿಸಲಷ್ಟೇ ಶಕ್ತವಾಯಿತು.