ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾಗೆ ಸಿಕ್ಸರ್‌ಗಳ ಸುರಿಮಳೆಗೈದ 15 ವರ್ಷದ ವೈಭವ್ ಸೂರ್ಯವಂಶಿ ಆಟಕ್ಕೆ ಇರ್ಫಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯುವ ಪ್ರತಿಭೆಯನ್ನು ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಆಯ್ಕೆ ಮಾಡುವಂತೆ ಪಠಾಣ್ ಆಗ್ರಹಿಸಿದ್ದು, ಈ ಹಿಂದೆ ವಯಸ್ಸಿನ ಕಾರಣದಿಂದ ವೈಭವ್‌ಗೆ ಅವಕಾಶ ಸಿಕ್ಕಿರಲಿಲ್ಲ.

ಗುವಾಹಟಿ: ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾರಂತಹ ವಿಶ್ವದ ನಂಬರ್ 1 ಬೌಲರ್‌ಗೆ ಸಿಕ್ಸರ್‌ಗಳ ಸುರಿಮಳೆಗೈದ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಆಟಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಫಿದಾ ಆಗಿದ್ದಾರೆ. ವೈಭವ್‌ನನ್ನು ಹೆಚ್ಚು ದಿನ ಕಾಯಿಸಬೇಡಿ, ಆದಷ್ಟು ಬೇಗ ಟೀಮ್ ಇಂಡಿಯಾಗೆ ಆಯ್ಕೆ ಮಾಡಿ ಎಂದು ಪಠಾಣ್ ಸೆಲೆಕ್ಟರ್‌ಗಳಿಗೆ ಮನವಿ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪಠಾಣ್ ಈ ಯುವ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Add Asianetnews Kannada as a Preferred SourcegooglePreferred

ವೈಭವ್ ಸೂರ್ಯವಂಶಿ ಆಟವನ್ನು ಕೊಂಡಾಡಿದ ಇರ್ಫಾನ್ ಪಠಾಣ್

ಮಂಗಳವಾರ ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವೈಭವ್ ತೋರಿದ ಆಟ ಪಠಾಣ್‌ರನ್ನು ಬೆರಗುಗೊಳಿಸಿದೆ. "ವಿಶ್ವ ಕ್ರಿಕೆಟ್‌ನಲ್ಲೇ 'GOAT' (Greatest Of All Time) ಎಂದು ಕರೆಯಬಹುದಾದ ಬೌಲರ್ ಬುಮ್ರಾ. ಆದರೆ, ವೈಭವ್ ಆತನ ಪ್ಲಾನ್‌ಗಳನ್ನೇ ಬದಲಿಸುವಂತೆ ಮಾಡಿದ" ಎಂದು ಪಠಾಣ್ ಯುವ ಬ್ಯಾಟರ್ ಆಟವನ್ನು ಕೊಂಡಾಡಿದ್ದಾರೆ.

"ತನ್ನ 15ನೇ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತೋರುತ್ತಿರುವ ಆಟಕ್ಕೆ ಸರಿಸಾಟಿಯೇ ಇಲ್ಲ. ಈ ಹಿಂದೆ ಯಾರೂ ಈ ರೀತಿ ಆಡುವುದನ್ನು ನೋಡಿಲ್ಲ. ಬುಮ್ರಾರನ್ನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಆತ ಅದನ್ನು ಸಾಬೀತುಪಡಿಸಿದ" ಎಂದು ಪಠಾಣ್ ವಿವರಿಸಿದ್ದಾರೆ.

"ಬುಮ್ರಾ ತಮ್ಮ ಎಂದಿನ ಪ್ಲಾನ್‌ಗಳನ್ನು ಬದಿಗಿಟ್ಟು ಸ್ಲೋ ಬಾಲ್‌ಗಳನ್ನು ಎಸೆಯುವಂತೆ ಮಾಡಿದ್ದೇ ವೈಭವ್‌ನ ನಿಜವಾದ ಗೆಲುವು" ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ. ಮಳೆಯಿಂದಾಗಿ 11 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಓಪನರ್ ಆಗಿ ಕಣಕ್ಕಿಳಿದ ವೈಭವ್, ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದ್ದರು. ಬುಮ್ರಾಗೆ ಬಾರಿಸಿದ ಎರಡು ಸಿಕ್ಸರ್‌ಗಳು ಸೇರಿದಂತೆ ಒಟ್ಟು 5 ಸಿಕ್ಸರ್‌ಗಳನ್ನು ವೈಭವ್ ಸಿಡಿಸಿದ್ದರು. ಕೇವಲ 15 ವರ್ಷದ ಆಟಗಾರನೊಬ್ಬ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ವಿಶ್ವದ ನಂಬರ್ 1 ಬೌಲರ್ ಮೇಲೆ ಒತ್ತಡ ಹೇರಿದ್ದು ಇಡೀ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿತ್ತು.

ಈ ಸೀಸನ್‌ನಲ್ಲಿ ವೈಭವ್ ತೋರಿದ ಎರಡನೇ ಸ್ಫೋಟಕ ಪ್ರದರ್ಶನವಿದು. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ವೈಭವ್ ಅರ್ಧಶತಕ (52) ಸಿಡಿಸಿದ್ದರು. 2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ತಂಡವು ವೈಭವ್‌ನನ್ನು 1.1 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ಹೊಂದಿರುವ ವೈಭವ್, ಶೀಘ್ರದಲ್ಲೇ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಇಲ್ಲಿಯವರೆಗೆ ಟೀಂ ಇಂಡಿಯಾಗೆ ಎಂಟ್ರಿಕೊಡಲು ಅಡ್ಡಿಯಾಗಿದ್ದ ವಯಸ್ಸು!

ಹೌದು, ಕಳೆದೊಂದು ವರ್ಷದಿಂದಲೂ ವೈಭವ್ ಸೂರ್ಯವಂಶಿ ತಾನಾಡಿದ ಬಹುತೇಕ ಎಲ್ಲಾ ಟೂರ್ನಿಗಳಲ್ಲೂ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ, ವಿಜಯ್ ಹಜಾರೆ ಟ್ರೋಫಿ, ಅಂಡರ್-19 ಏಷ್ಯಾಕಪ್ ಟೂರ್ನಿ, ಅಂಡರ್-19 ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ, ಐಸಿಸಿ ಅಂಡರ್-19 ವಿಶ್ವಕಪ್, ಐಪಿಎಲ್ ಹೀಗೆ ಎಲ್ಲಾ ಟೂರ್ನಿಗಳಲ್ಲೂ ವೈಭವ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ಫ್ಯಾನ್ಸ್ ಇಷ್ಟೆಲ್ಲಾ ಪ್ರತಿಭೆ ಇರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಸೀನಿಯರ್ಸ್ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಲೇ ಬಂದಿದ್ದರು. ಆದರೆ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ವಯಸ್ಸು ಅಡ್ಡಿಯಾಗಿತ್ತು.

ಹೌದು, ಐಸಿಸಿ ನಿಯಮಾವಳಿಗಳ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ ವಯಸ್ಸಿನ ಮಿತಿ 15 ವರ್ಷಗಳಾಗಿರಬೇಕು ಎನ್ನುವ ನಿಯಮವಿದೆ. ಇತ್ತೀಚೆಗಷ್ಟೇ ವೈಭವ್ ಸೂರ್ಯವಂಶಿ 15ನೇ ವರ್ಷಕ್ಕೆ ಕಾಲಿಟ್ಟಿದ್ದು, ಸದ್ಯದಲ್ಲೇ ಭಾರತ ತಂಡಕ್ಕೆ ಎಂಟ್ರಿಕೊಡುವ ವಿಶ್ವಾಸದಲ್ಲಿದ್ದಾರೆ.