'Naatu Naatu' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ರೈನಾ-ಪಠಾಣ್ ಜೋಡಿ..! ವಿಡಿಯೋ ವೈರಲ್
ನಾಟು ನಾಟು ಹಾಡಿಗೆ ರೈನಾ-ಪಠಾಣ್ ಡ್ಯಾನ್ಸ್
ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಜಯಿಸಿರುವ RRR ಸಿನಿಮಾದ ಹಾಡು
ಹಲವು ಸೆಲಿಬ್ರಿಟಿಗಳು ನಾಟು ನಾಟು ಹಾಡಿಗೆ ಡ್ಯಾನ್ಸ್
ನವದೆಹಲಿ(ಮಾ.20): ಕಳೆದ ವಾರವಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ RRR ಸಿನಿಮಾದ 'ನಾಟು ನಾಟು' ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿತ್ತು. 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಡಿ ಗಾಗ ಹಾಗೂ ರಿಹಾನ್ನದಂತಹ ಹಾಡನ್ನು ಹಿಂದಿಕ್ಕಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ನಾಟು ನಾಟು ಹಾಡು ಜಗತ್ತಿನಾದ್ಯಂತ ಜನರ ಬಾಯಲ್ಲಿ ಗುನುಗಲಾರಂಭಿಸಿದ್ದು, ಹಲವು ಸೆಲಿಬ್ರಿಟಿಗಳು ಈ ಹಾಡಿಗೆ ತಮ್ಮ ಕಾಲ್ಚಳ ತೋರಿಸುತ್ತಿದ್ದಾರೆ.
ಕೆಲದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ನಾಟು ನಾಟು ಹಾಡಿಗೆ ಕಾಲು ಕುಣಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಹೊಸ ಸೇರ್ಪಡೆ ಎನ್ನುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಇರ್ಫಾನ್ ಪಠಾಣ್ ಕೂಡಾ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದು, ವಿಡಿಯೋವೀಗ ವೈರಲ್ ಆಗಿದೆ. ಈ ಇಬ್ಬರು ಕ್ರಿಕೆಟಿಗರು ಫುಲ್ ಜೋಶ್‌ನಲ್ಲಿ ಡ್ಯಾನ್ಸ್ ಮಾಡಿದ್ದು, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ್ದಾರೆ. ಇರ್ಫಾನ್ ಪಠಾಣ್ ಹಾಗೂ ಸುರೇಶ್ ರೈನ್ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡಾ ಅವರ ಪಕ್ಕದಲ್ಲೇ ಇರುವುದು ಕಂಡು ಬಂದಿದೆ.
ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!
ಹೀಗಿತ್ತು ನೋಡಿ ಇರ್ಫಾನ್ ಪಠಾಣ್ ಹಾಗೂ ಸುರೇಶ್ ರೈನಾ ಡ್ಯಾನ್ಸ್ ಮಾಡಿದ ವಿಡಿಯೋ:
ಲೆಜೆಂಡ್ಸ್ ಲೀಗ್‌ನಲ್ಲಿ ಮುಂದುವರೆದ ಇಂಡಿಯಾ ಮಹಾರಾಜಾಸ್ ಪರದಾಟ:
ಸುರೇಶ್ ರೈನಾ ಹಾಗೂ ಇರ್ಫಾನ್ ಪಠಾಣ್ ಇಬ್ಬರು, ಸದ್ಯ ಕತಾರ್‌ನಲ್ಲಿ ನಡೆಯುತ್ತಿರುವ 2023ನೇ ಸಾಲಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್ ಟೂರ್ನಿಯಲ್ಲಿ ಇಂಡಿಯಾ ಮಹರಾಜಾಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ಇಂಡಿಯಾ ಮಹಾರಾಜಾಸ್ ತಂಡವು ಆಡಿದ 4 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಜಯಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇದೀಗ ಗೌತಮ್ ಗಂಭೀರ್ ನೇತೃತ್ವದ ಇಂಡಿಯಾ ಮಹರಾಜಾಸ್ ತಂಡವು ವರ್ಲ್ಡ್ ಜೈಂಟ್ಸ್ ಎದುರು ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಇಂಡಿಯಾ ಮಹರಾಜಾಸ್ ತಂಡವು ಗುಂಪು ಹಂತದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿದೆ.