* ಕಾಮೆಂಟ್ರಿ ಮೂಲಕ ಐಪಿಎಲ್‌ಗೆ ರಂಗು ತುಂಬಲು ರೆಡಿಯಾದ ರವಿಶಾಸ್ತ್ರಿ* ಐಪಿಎಲ್‌ ಒಂದು ರೀತಿ ವಿಶ್ವ ಶ್ರೇಷ್ಠ ಫಿಸಿಯೋ ಇದ್ದಂತೆ ಮಾಜಿ ಕೋಚ್* 15ನೇ ಆವೃತ್ತಿಯ ಐಪಿಎಲ್‌ ಮಾರ್ಚ್‌ 26ರಿಂದ ಆರಂಭ

ನವದೆಹಲಿ(ಮಾ.23): ಆಟಗಾರರ ಜೀವನವನ್ನೇ ಬದಲಿಸುವ ಐಪಿಎಲ್‌ನಲ್ಲಿ (IPL) ಆಡಲು ಎಲ್ಲರೂ ಇಚ್ಛಿಸುತ್ತಾರೆ. ಟೂರ್ನಿ ಶುರುವಾಗುತ್ತದೆ ಎಂದ ಕೂಡಲೇ ಗಾಯಗೊಂಡಿದ್ದವರೆಲ್ಲಾ ಫಿಟ್‌ ಆಗಿಬಿಡುತ್ತಾರೆ. ಐಪಿಎಲ್‌ ಒಂದು ರೀತಿ ವಿಶ್ವ ಶ್ರೇಷ್ಠ ಫಿಸಿಯೋ ಇದ್ದಂತೆ ಎಂದು ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಹೇಳಿದ್ದಾರೆ. ಹಲವು ವರ್ಷಗಳ ಬಳಿಕ ಕಾಮೆಂಟ್ರಿಗೆ ವಾಪಸಾಗುತ್ತಿರುವ ಅವರು, ಈ ವರ್ಷ ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. 

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್‌ 26ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ರನ್ನರ್ ಅಪ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಂಬೈನ ವಾಂಖೆಡೆ ಮೈದಾನದಲ್ಲಿ ಉದ್ಘಾಟನಾ ಪಂದ್ಯವನ್ನಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಲಿವೆ. ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆದ ಬಳಿಕ ಕಾಮೆಂಟ್ರಿಯಿಂದ ದೂರ ಉಳಿದಿದ್ದರು. ಇದೀಗ 7 ವರ್ಷಗಳ ಬಳಿಕ ಕಂಚಿನ ಕಂಠದ ರವಿಶಾಸ್ತ್ರಿ ಐಪಿಎಲ್ ಮೂಲಕ ಮತ್ತೊಮ್ಮೆ ಭರ್ಜರಿಯಾಗಿಯೇ ಕಾಮೆಂಟ್ರಿಗೆ ಕಮ್‌ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. 

ಮಂಗಳವಾರ ಐಪಿಎಲ್‌ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಈ ವರ್ಷ ಐಪಿಎಲ್‌ನಲ್ಲಿ ಭಾರತದ ಭವಿಷ್ಯದ ನಾಯಕನ ಹುಡುಕಾಟ ನಡೆಯಲಿದೆ. ಕೆ.ಎಲ್ ರಾಹುಲ್‌ (KL Rahul), ರಿಷಭ್ ಪಂತ್‌, ಶ್ರೇಯಸ್‌ ಅಯ್ಯರ್‌ರಂತಹ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆ’ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದರು.

IPL 2022: ಇವರೇ ನೋಡಿ ಅತಿವೇಗದ ಶತಕ, ಅರ್ಧಶತಕ ಸಿಡಿಸಿದ ಆಟಗಾರರು..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾದ ಗುಜರಾತ್ ಟೈಟಾನ್ಸ್, ಲಖನೌ ಸೂಪರ್‌ ಜೈಂಟ್ಸ್‌ ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಲೀಗ್ ಹಂತದ ಎಲ್ಲಾ ಪಂದ್ಯಗಳಿಗೆ ಮುಂಬೈನ ಮೂರು ಹಾಗೂ ಪುಣೆಯ ಒಂದು ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ರವಿಶಾಸ್ತ್ರಿ ಜತೆಗೆ ಸುರೇಶ್ ರೈನಾ ಕೂಡಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರವನ್ನು ಐಪಿಎಲ್ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ ಇಂಡಿಯಾ ಸಂಸ್ಥೆಯು ಖಚಿತಪಡಿಸಿದೆ.

ಐಪಿಎಲ್‌: ಏಪ್ರಿಲ್ 7ರ ಬಳಿಕ ಡೆಲ್ಲಿ ವೇಗಿ ನೋಕಿಯ ಕಣಕ್ಕೆ

ಮುಂಬೈ: ದಕ್ಷಿಣ ಆಫ್ರಿಕಾ ವೇಗಿ ಏನ್ರಿಚ್‌ ನೋಕಿಯ ಏಪ್ರಿಲ್‌ 7ರ ನಂತರ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಂಗಳವಾರ ಮಾಹಿತಿ ನೀಡಿದೆ. ಗಾಯಗೊಂಡಿದ್ದ ಕಾರಣ ಕಳೆದ ನವೆಂಬರ್‌ ಬಳಿಕ ಕ್ರಿಕೆಟ್‌ನಿಂದ ದೂರವಿದ್ದ ನೋಕಿಯ ಈಗಾಗಲೇ ಮುಂಬೈಗೆ ಆಗಮಿಸಿದ್ದು, ತಂಡ ಕೂಡಿಕೊಂಡಿದ್ದಾರೆ. 

ಕ್ವಾರಂಟೈನ್‌ನಲ್ಲಿರುವ ಅವರು ಏಪ್ರಿಲ್‌ 7ರಂದು ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ನಾಯಕ ರಿಷಭ್ ಪಂತ್, ಏನ್ರಿಚ್ ನೋಕಿಯ, ಅಕ್ಷರ್ ಪಟೇಲ್ ಹಾಗೂ ಪೃಥ್ವಿ ಶಾ ಅವರನ್ನು ರೀಟೈನ್ ಮಾಡಿಕೊಂಡಿತ್ತು.

ಐಪಿಎಲ್‌: ಶೇ.25ಕ್ಕಿಂತ ಹೆಚ್ಚು ಪ್ರೇಕ್ಷಕರಿಗೆ ಪ್ರವೇಶ?

ಮುಂಬೈ: ಕೋವಿಡ್‌ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿರುವ ಐಪಿಎಲ್‌ 15ನೇ ಆವೃತ್ತಿಯ ಪಂದ್ಯಗಳಿಗೆ ಶೇ.25ಕ್ಕಿಂತ ಹೆಚ್ಚಿನ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಪ್ರವೇಶ ಸಿಗುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಬೆಂಗಳೂರಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ಟೆಸ್ಟ್‌ಗೆ ಶೇ.100ರಷ್ಟು ಪ್ರೇಕ್ಷಕರಿಗೆ ಪ್ರವೇಶ ದೊರೆತಿತ್ತು.