14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ 42 ವರ್ಷದ ಹಿರಿಯ ಆಟಗಾರ ಹಾಗೂ 16 ವರ್ಷದ ಕಿರಿಯ ಆಟಗಾರರ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಫೆ.18): ಭಾರತದ ಮಾಜಿ ಸ್ಪಿನ್ನರ್‌ ದಿಲೀಪ್‌ ದೋಶಿ ಅವರ ಪುತ್ರ 42 ವರ್ಷದ ನಯನ್‌ ದೋಶಿ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿಹಿರಿಯ ಆಟಗಾರ. 2013ರ ಬಳಿಕ ನಯನ್‌ ಪ್ರಥಮ ದರ್ಜೆ, ಲಿಸ್ಟ್‌ ‘ಎ’ ಇಲ್ಲವೇ ಟಿ20 ಪಂದ್ಯದಲ್ಲಿ ಆಡಿಲ್ಲ. 

ನಯನ್ ದೋಶಿ ಮೂಲಬೆಲೆ 20 ಲಕ್ಷ ರುಪಾಯಿ ಎಂದು ನಿಗದಿಯಾಗಿದೆ. ನಯನ್ ದೋಶಿ 2001ರಿಂದ 2013ರ ಅವಧಿಯವರೆಗೆ 70 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಸೌರಾಷ್ಟ್ರ, ಡರ್ಬಿಶೈರ್‌, ರಾಜಸ್ಥಾನ ರಾಯಲ್ಸ್‌ ಹಾಗೂ ಸರ್ರೆ ತಂಡಗಳನ್ನು ನಯನ್‌ ದೋಶಿ ಪ್ರತಿನಿಧಿಸಿದ್ದಾರೆ.

Scroll to load tweet…

ಇನ್ನು ಆಫ್ಘಾನಿಸ್ತಾನದ 16 ವರ್ಷದ ಎಡಗೈ ಸ್ಪಿನ್ನರ್‌ ನೂರ್‌ ಅಹ್ಮದ್‌ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿಕಿರಿಯ ಆಟಗಾರ. ನೂರ್‌ ಇತ್ತೀಚೆಗಷ್ಟೇ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಮೆಲ್ಬರ್ನ್‌ ರೆನಿಗೇಡ್ಸ್‌ ಪರ ಆಡಿದ್ದರು. ನಾಗಾಲ್ಯಾಂಡ್‌ನ 16 ವರ್ಷದ ಖ್ರೀವಿಟ್ಸೊ ಕೆನ್ಸೆ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅತಿಕಿರಿಯ ಕ್ರಿಕೆಟಿಗ. ಸ್ಪಿನ್ನರ್‌ ಕೆನ್ಸೆ ಇತ್ತೀಚೆಗೆ ನಡೆದಿದ್ದ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 7 ವಿಕೆಟ್‌ ಕಬಳಿಸಿದ್ದರು.

ಸೇಲ್‌ ಆಗ್ತಾರಾ ಕರುಣ್‌ ನಾಯರ್‌?

ಹರಾಜಿನಲ್ಲಿ ಕರ್ನಾಟಕದ 14 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕಳಪೆ ಲಯದ ಸಮಸ್ಯೆ ಎದುರಿಸುತ್ತಿರುವ ಕರುಣ್‌ ನಾಯರ್‌ರನ್ನು ಖರೀದಿಸುವ ಆಸಕ್ತಿಯನ್ನು ತಂಡಗಳು ತೋರುತ್ತವೆಯೇ ಎನ್ನುವ ಕುತೂಹಲವಿದೆ. ಐಪಿಎಲ್‌ ಆಡಿದ ಅನುಭವವಿರುವ ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಜೆ.ಸುಚಿತ್‌, ಕೆ.ಸಿ.ಕರಿಯಪ್ಪ, ಅನಿರುದ್ಧ ಜೋಶಿ, ರೋನಿತ್‌ ಮೋರೆ ಮತ್ತೆ ಯಾವುದಾದರೂ ತಂಡ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. 

ಐಪಿಎಲ್ ಮಿನಿ ಹರಾಜಿನಲ್ಲಿ ಯಾರಿಗೆ ಬಂಪರ್‌..?

ಇವರ ಜೊತೆಗೆ ಭಾರತದ ಮಾಜಿ ವಿಕೆಟ್‌ ಕೀಪರ್‌ ಸಯ್ಯದ್‌ ಕಿರ್ಮಾನಿ ಪುತ್ರ ಸಾದಿಕ್‌ ಕಿರ್ಮಾನಿ, ರೋಹನ್‌ ಕದಂ, ಶುಭಾಂಗ್‌ ಹೆಗಡೆ, ಮೊಹಮದ್‌ ತಾಹ, ಕೆ.ಎಲ್‌.ಶ್ರೀಜಿತ್‌, ಕುಶಾಲ್‌ ವಾದ್ವಾನಿ, ಆಶ್‌ರ್‍ದೀಪ್‌ ಬ್ರಾರ್‌ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಮಾಜಿ ಆಟಗಾರ ಸ್ಟುವರ್ಟ್‌ ಬಿನ್ನಿ ಸಹ ಪಟ್ಟಿಯಲ್ಲಿದ್ದಾರೆ.