ಚೆನ್ನೈ(ಫೆ.18): 2021ರ ಐಪಿಎಲ್‌ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಗುರುವಾರ ಇಲ್ಲಿ ನಡೆಯಲಿದ್ದು, ಖಾಲಿ ಇರುವ 61 ಸ್ಥಾನಗಳಿಗೆ ಒಟ್ಟು 292 ಆಟಗಾರರ ಹರಾಜು ನಡೆಯಲಿದೆ. ಆಸ್ಪ್ರೇಲಿಯಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ರಾಜಸ್ಥಾನ ರಾಯಲ್ಸ್‌ನ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಬಾಂಗ್ಲಾದೇಶದ ತಾರಾ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌, ಇಂಗ್ಲೆಂಡ್‌ನ ಮೋಯಿನ್‌ ಅಲಿ, ಡೇವಿಡ್‌ ಮಲಾನ್‌ ಹೀಗೆ ಟಿ20 ತಜ್ಞ ಕ್ರಿಕೆಟಿಗರು ದೊಡ್ಡ ಮೊತ್ತಕ್ಕೆ ಸೇಲ್‌ ಆಗುವ ನಿರೀಕ್ಷೆ ಇದೆ.

292 ಆಟಗಾರರ ಪೈಕಿ ಭಾರತದ 164 ಹಾಗೂ 125 ವಿದೇಶಿ ಆಟಗಾರರಿದ್ದಾರೆ. ಅಸೋಸಿಯೇಟ್‌ ರಾಷ್ಟ್ರಗಳ 3 ಆಟಗಾರರು ಸಹ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ ಗರಿಷ್ಠ 11 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ತಂಡದ ಬಳಿ 35.4 ಕೋಟಿ ರು. ಹಣವಿದೆ. ಸನ್‌ರೈಸ​ರ್ಸ್‌ ಹೈದರಾಬಾದ್‌ಗೆ ಕೇವಲ 3 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ತಂಡದ ಬಳಿ 10.75 ಕೋಟಿ ರು. ಇದೆ. ಕನ್ನಡಿಗ ಅನಿಲ್‌ ಕುಂಬ್ಳೆ ಮಾರ್ಗದರ್ಶನದ, ಕೆ.ಎಲ್‌.ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಬಳಿ ಗರಿಷ್ಠ ಅಂದರೆ 53.20 ಕೋಟಿ ರು. ಹಣವಿದ್ದು 9 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶವಿದೆ.

IPL 2021 ಹರಾಜಿಗೆ ಕ್ಷಣಗಣನೆ ಆರಂಭ..!

ಆಲ್ರೌಂಡರ್‌ ಮ್ಯಾಕ್ಸ್‌ವೆಲ್‌ರನ್ನು ಆರ್‌ಸಿಬಿ ತಂಡ ಖರೀದಿಸುವ ನಿರೀಕ್ಷೆ ಇದೆ. ತಂಡಕ್ಕೆ ಒಬ್ಬ ಆಲ್ರೌಂಡರ್‌ನ ಅಗತ್ಯವಿದೆ. ಅನುಭವಿ ಬ್ಯಾಟ್ಸ್‌ಮನ್‌ಗಳ ಕೊರತೆ ಎದುರಿಸುತ್ತಿರುವ ಚೆನ್ನೈ, ಸ್ಟೀವ್‌ ಸ್ಮಿತ್‌ ಇಲ್ಲವೇ ವಿಶ್ವ ನಂ.1 ಟಿ20 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌ರನ್ನು ಖರೀದಿಸಲು ಆಸಕ್ತಿ ತೋರಬಹುದು. ಮೋಯಿನ್‌ ಅಲಿ, ಹರ್ಭಜನ್‌ ಸಿಂಗ್‌ ಸೇರಿದಂತೆ ಇನ್ನೂ ಅನೇಕ ಹಿರಿಯ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಪುತ್ರ ಅರ್ಜುನ್‌ ಸಹ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ಮುಂಬೈ ಇಂಡಿಯನ್ಸ್‌ ತಂಡವೇ ಅವರನ್ನು ಖರೀದಿ ಮಾಡಿದರೆ ಅಚ್ಚರಿಯಿಲ್ಲ. ಆಟಗಾರರ ಗರಿಷ್ಠ ಮೂಲಬೆಲೆ 2 ಕೋಟಿ ರು. ಆಗಿದ್ದು, ಕನಿಷ್ಠ ಮೂಲ ಬೆಲೆ 20 ಲಕ್ಷ ರು. ಆಗಿದೆ. 2 ಕೋಟಿ ರು. ಪಟ್ಟಿಯಲ್ಲಿ ಒಟ್ಟು 11 ಆಟಗಾರರಿದ್ದಾರೆ.

ಸ್ಥಳ: ಚೆನ್ನೈ
ಹರಾಜು ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್