2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಪಂಜಾಬ್ ಕಿಂಗ್ಸ್ಗೆ ಟ್ರೇಡ್ ಆಗಲಿದ್ದಾರೆ ಎಂದು ಆರ್. ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ನಮನ್ ಧೀರ್ ಮುಂಬೈ ತಂಡದ ನೂತನ ನಾಯಕರಾಗುವ ಅಚ್ಚರಿಯ ಸಾಧ್ಯತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಯಾವ ತಂಡದ ತೆಕ್ಕೆಗೆ ಜಾರುತ್ತಾರೆ ಎನ್ನುವುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. ಅದರಲ್ಲೂ ಇದೀಗ ಕೀರನ್ ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಆದ ಬಳಿಕವಂತೂ ಮತ್ತೆ ಪಾಂಡ್ಯ ಭವಿಷ್ಯದ ಕುರಿತಂತೆ ಚರ್ಚೆಗಳು ಶುರುವಾಗಿವೆ.
ಇನ್ನು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್ಗೂ ಮುನ್ನ ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್ಗೆ ಟ್ರೇಡ್ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅಶ್ವಿನ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಮುಂಬೈ ಇಂಡಿಯನ್ಸ್ ಲೆಕ್ಕಾಚಾರವೇನು?
ಇನ್ನು ಮುಂಬೈ ಇಂಡಿಯನ್ಸ್ ಅವರ ಪ್ಲಾನ್ ಕುರಿತಂತೆ ಮಾತನಾಡಿರುವ ರವಿಚಂದ್ರನ್ ಅಶ್ವಿನ್, ಇನ್ನು ಮುಂದೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಜತೆ ಮುಂದುವರೆಯುವುದು ಬಹುತೇಕ ಅನುಮಾನ ಎನಿಸಿದೆ. ನನಗೆ ಅನಿಸುವ ಪ್ರಕಾರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಹರಾಜಿಗೆ ರಿಲೀಸ್ ಮಾಡುವುದಕ್ಕಿಂತ ಟ್ರೇಡ್ಗೆ ಮುಂದಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ಗೆ ನೀಡಿ, ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ದಕ್ಷಿಣ ಆಫ್ರಿಕಾ ಮೂಲದ ಸ್ಟಾರ್ ಆಲ್ರೌಂಡರ್ ಮಾರ್ಕೊ ಯಾನ್ಸನ್ ಹಾಗೂ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಯುಜುವೇಂದ್ರ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂಬರುವ ಐಪಿಎಲ್ ಸೀಸನ್ನಲ್ಲಿ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ ಜೆರ್ಸಿಯಲ್ಲಿ ಮೈದಾನಕ್ಕಿಳಿದರೂ ಅಚ್ಚರಿಯೇನಿಲ್ಲ.
ನಮನ್ ಧೀರ್ ಮುಂಬೈ ಇಂಡಿಯನ್ಸ್ ನೂತನ ಕ್ಯಾಪ್ಟನ್?
ಇನ್ನು ರವಿಚಂದ್ರನ್ ಅಶ್ವಿನ್ ಅವರ ಪ್ರಕಾರ, ಮುಂಬರುವ ಐಪಿಎಲ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ನ ನೂತನ ಕ್ಯಾಪ್ಟನ್ ಅಗಿ ನಮನ್ ಧೀರ್ ಅಚ್ಚರಿ ರೀತಿಯಲ್ಲಿ ನೇಮಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಮನ್ ಧೀರ್ ಅವರಲ್ಲಿರುವ ಆತ್ಮವಿಶ್ವಾಸ, ಗೇಮ್ ಕುರಿತಾದ ಅವರ ಜ್ಞಾನ ಮತ್ತು ಮೈದಾನದಲ್ಲಿ ಅವರ ಶಾಂತ ಸ್ವಭಾವಗಳನ್ನೆಲ್ಲಾ ನೋಡಿದರೆ ಮುಂಬರುವ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿರಲಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
ಅಂದಹಾಗೆ 2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರಂದು ನಿಗದಿಯಾಗಿದ್ದು, ಇದಕ್ಕೂ ಒಂದು ತಿಂಗಳು ಮುಂಚಿತವಾಗಿ ಎಲ್ಲಾ ಫ್ರಾಂಚೈಸಿಗಳು ಅಂದರೆ ನವೆಂಬರ್ 15ರೊಳಗಾಗಿ ತಮ್ಮ ರೀಟೈನ್ ಹಾಗೂ ರಿಲೀಸ್ ಮಾಡಲಿರುವ ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ.







