ಶನಿವಾರದ ಐಪಿಎಲ್ ಪಂದ್ಯಗಳಲ್ಲಿ 986 ರನ್‌ಗಳು ಹರಿದುಬಂದು ಹೊಸ ದಾಖಲೆ ಸೃಷ್ಟಿಯಾಯಿತು. ಪಂಜಾಬ್ ಕಿಂಗ್ಸ್ ಟಿ20 ಕ್ರಿಕೆಟ್‌ನಲ್ಲೇ ಗರಿಷ್ಠ ರನ್ ಚೇಸ್ ಮಾಡಿ ಇತಿಹಾಸ ಬರೆದರೆ, ಸನ್‌ರೈಸರ್ಸ್ ಹೈದರಾಬಾದ್ ಕೂಡ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ನವದೆಹಲಿ/ಜೈಪುರ: ಐಪಿಎಲ್‌ನಲ್ಲಿ ಒಂದೇ ದಿನ ಹತ್ತಿರತ್ತಿರ ಒಂದು ಸಾವಿರ ರನ್! ಟಿ20 ಕ್ರಿಕೆಟ್‌ನಲ್ಲೀಗ ಯಾವುದೂ ಅಸಾಧ್ಯವಲ್ಲ, ಎಷ್ಟು ದೊಡ್ಡ ಮೊತ್ತವಾದರೂ ತಂಡಗಳು ಯಶಸ್ವಿಯಾಗಿ ಬೆನ್ನತ್ತಲಿವೆ ಎನ್ನುವುದಕ್ಕೆ ಶನಿವಾರ ಐಪಿಎಲ್‌ನಲ್ಲಿ ನಡೆದ 2 ಪಂದ್ಯಗಳೇ ಸಾಕ್ಷಿ. ಒಂದೇ ದಿನ ಬರೋಬ್ಬರಿ 986 ರನ್ ದಾಖಲಾಯಿತು. ಐಪಿಎಲ್‌ನಲ್ಲಿ ಇದು ಹೊಸ ದಾಖಲೆ!
ಶನಿವಾರದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 265 ರನ್ ಗುರಿಯನ್ನು ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿ ಬೆನ್ನತ್ತಿ, ಟಿ20 ಕ್ರಿಕೆಟ್‌ನಲ್ಲೇ ಗರಿಷ್ಠ ರನ್ ಚೇಸ್ ದಾಖಲೆ ಬರೆದರೆ, 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 229 ರನ್ ಗುರಿಯನ್ನು ಸನ್‌ರೈಸರ್ಸ್ ಬೆನ್ನತ್ತಿ, ಐಪಿಎಲ್‌ನಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.
2024ರ ಏ.27ರಂದು ಡೆಲ್ಲಿ ಹಾಗೂ ಮುಂಬೈ ಪಂದ್ಯದಲ್ಲಿ 504, ಲಖನೌ ಹಾಗೂ ರಾಜಸ್ಥಾನ ಪಂದ್ಯದಲ್ಲಿ 392 ಸೇರಿ ಒಂದೇ ದಿನ 896 ರನ್ ದಾಖಲಾಗಿತ್ತು. ಇದು ಐಪಿಎಲ್‌ನಲ್ಲಿ ಒಂದೇ ದಿನ ದಾಖಲಾದ ಅತಿಹೆಚ್ಚು ರನ್ ದಾಖಲೆ ಎನಿಸಿತ್ತು.
ಪಂಜಾಬ್ ಗ್ರೇಟ್ ಚೇಸ್
ಜೈಪುರ: ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್ ಗುರಿಯನ್ನು ಪಂಜಾಬ್ 6 ವಿಕೆಟ್ ಉಳಿಸಿಕೊಂಡು, ಇನ್ನೂ 7 ಎಸೆತ ಬಾಕಿ ಇರುವಂತೆ ತಲುಪಿತು. ಇದರೊಂದಿಗೆ ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕೆ.ಎಲ್.ರಾಹುಲ್ ಹಾಗೂ ನಿತೀಶ್ ರಾಣಾರ ಸ್ಫೋಟಕ ಆಟದಿಂದ 20 ಓವರಲ್ಲಿ 2 ವಿಕೆಟ್‌ಗೆ 264 ರನ್ ಪೇರಿಸಿತು. 12 ಹಾಗೂ 51 ರನ್ ಗಳಿಸಿದ್ದಾಗ ಜೀವದಾನ ಪಡೆದ ರಾಹುಲ್ 67 ಎಸೆತದಲ್ಲಿ 16 ಬೌಂಡರಿ, 9 ಸಿಕ್ಸರ್‌ನೊಂದಿಗೆ 152 ರನ್ ಗಳಿಸಿ ಔಟಾಗದೆ ಉಳಿದರು. ರಾಣಾ 44 ಎಸೆತದಲ್ಲಿ 91 ರನ್ ಚಚ್ಚಿದರು. ಬೃಹತ್ ಮೊತ್ತದ ಚೇಸ್‌ಗಿಳಿದ ಪಂಜಾಬ್‌ಗೆ ಪ್ರಭ್‌ಸಿಮ್ರನ್(76) ಹಾಗೂ ಪ್ರಿಯಾನ್ಶ್ ಆರ್ಯಾ(43) ಆಸರೆಯಾದರು. 42 ಎಸೆತದಲ್ಲಿ 126 ರನ್ ಬಾರಿಸಿ ಉತ್ತಮ ಆರಂಭ ನೀಡಿದರು. ಬಳಿಕ 3 ಎಸೆತದ ಅಂತರದಲ್ಲಿ ಕರುಣ್ ನಾಯರ್ 2 ಕ್ಯಾಚ್ ಕೈಚೆಲ್ಲಿ ಶ್ರೇಯಸ್ ಅಯ್ಯರ್‌ಗೆ ಜೀವದಾನ ನೀಡಿದರು. ಇದರ ಲಾಭವೆತ್ತಿದ ಶ್ರೇಯಸ್ 36 ಎಸೆತದಲ್ಲಿ 7 ಸಿಕ್ಸರ್‌ನೊಂದಿಗೆ 71 ರನ್ ಸಿಡಿಸಿ ತಂಡವನ್ನು ಜಯದ ಗೆರೆ ದಾಟಿಸಿದರು.
ಸ್ಕೋರ್: ಡೆಲ್ಲಿ 264/2 (ರಾಹುಲ್ 152*, ರಾಣಾ 91, ಅರ್ಶ್‌ದೀಪ್ 1-49), ಪಂಜಾಬ್ 18.5 ಓವರಲ್ಲಿ 265/4(ಪ್ರಭ್‌ಸಿಮ್ರನ್ 76, ಶ್ರೇಯಸ್ 71*, ಆರ್ಯಾ 43, ಕುಲ್ದೀಪ್ 2-46) ಪಂದ್ಯಶ್ರೇಷ್ಠ: ರಾಹುಲ್
ಸನ್‌ಗೆ ಸತತ 4ನೇ ಜಯ
ಜೈಪುರ: ಸನ್‌ರೈಸರ್ಸ್ ಸತತ 4ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 6 ವಿಕೆಟ್‌ಗೆ 228 ರನ್ ಗಳಿಸಿತು. ವೈಭವ್ 36 ಎಸೆತದಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. 37 ಎಸೆತದಲ್ಲಿ 103 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸಲ್ಲಿ 5 ಬೌಂಡರಿ, 12 ಸಿಕ್ಸರ್‌ಗಳಿದ್ದವು. ವೈಭವ್ ಔಟಾದಾಗ ತಂಡದ ಮೊತ್ತ 13.5 ಓವರಲ್ಲಿ 170 ರನ್. ಆ ಬಳಿಕ 6.1 ಓವರಲ್ಲಿ ತಂಡ ಗಳಿಸಿದ್ದು ಕೇವಲ 58 ರನ್. ಇದು ರಾಯಲ್ಸ್‌ಗೆ ಮುಳುವಾಯಿತು. 4 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಕಮಿನ್ಸ್ 4 ಓವರಲ್ಲಿ ಕೇವಲ 27 ರನ್ ನೀಡಿ 1 ವಿಕೆಟ್ ಕಿತ್ತರು.
ಸನ್‌ರೈಸರ್ಸ್‌ಗೆ ಅಭಿಷೇಕ್ ಹಾಗೂ ಕಿಶನ್ ಆಸರೆಯಾದರು. ಅಭಿ 27 ಎಸೆತದಲ್ಲಿ 57, ಕಿಶನ್ 31 ಎಸೆತದಲ್ಲಿ 74 ರನ್ ಚಚ್ಚಿದರು. ಕ್ಲಾಸೆನ್ 29, ನಿತೀಶ್ 36 ರನ್ ಗಳಿಸಿ ನೆರವಾದರು. 18.3 ಓವರಲ್ಲೇ ಹೈದ್ರಾಬಾದ್ 5 ವಿಕೆಟ್ ಜಯದ ನಗೆ ಬೀರಿತು.
ಸ್ಕೋರ್: ರಾಜಸ್ಥಾನ 20 ಓವರಲ್ಲಿ 228/6 (ವೈಭವ್ 103, ಜುರೆಲ್ 51, ಕಮಿನ್ಸ್ 1-27, ಮಾಲಿಂಗ 2-38), ಸನ್‌ರೈಸರ್ಸ್ 18.3 ಓವರಲ್ಲಿ 229/5 (ಕಿಶನ್ 74, ಅಭಿ 57, ಆರ್ಚರ್ 2-34) ಪಂದ್ಯಶ್ರೇಷ್ಠ: ಇಶಾನ್ ಕಿಶನ್


