14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ, ಕೊಂಡಾಟಕ್ಕೆ ಪಾತ್ರರಾದರು. ಆದರೆ, ಅವರ ವಯಸ್ಸಿನ ಬಗ್ಗೆ ವಿವಾದ ಎದ್ದಿದೆ. ಸಮಸ್ತಿಪುರದ ಇಬ್ಬರು ವೈಭವ್ 16 ವರ್ಷದವರು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ವೈಭವ್ 2023ರಲ್ಲಿ ತಾನು 14 ವರ್ಷದವನೆಂದು ಹೇಳಿದ್ದ ವಿಡಿಯೋ ಕೂಡ ವೈರಲ್ ಆಗಿದೆ. ಈ ವಯಸ್ಸಿನ ವಿವಾದ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: 14 ವರ್ಷದ ವೈಭವ್ ಸೂರ್ಯವಂಶಿ ಶತಕ ದಾಖಲಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತು ತನ್ನತ್ತ ನೋಡುವಂತೆ ಮಾಡಿದ್ದರು. ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್, ಗೂಗಲ್ ಸಿಇಓ ಸುಂದರ್ ಪಿಚೈ ಸೇರಿದಂತೆ ಜಾಗತೀಕ ಗಣ್ಯರು ವೈಭವ್ ಸೂರ್ಯವಂಶಿಯ ಆಟವನ್ನು ಕೊಂಡಾಡಿದ್ದಾರೆ. ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕ ದಾಖಲಿಸಿದ್ದು, ಕಿರಿಯ ವಯಸ್ಸಿನ ಆಟಗಾರ ಸ್ಪೋಟಕ್ಕೆ ಎಲ್ಲರೂ ಫಿಧಾ ಆಗಿದ್ದಾರೆ. ಶತಕ ದಾಖಲಿಸಿದ ನಂತರದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲಿಯೇ ಔಟ್ ಆದರು. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ದೀಪಕ್ ಚಹಾರ್ ಎಸೆದ ಎಸೆತಕ್ಕೆ ವೈಭವ್ ಸೂರ್ಯವಂಶಿ ಔಟ್ ಆದರು. ಈ ಎಲ್ಲಾ ಬೆಳವಣಿಗೆ ನಡುವೆ ವೈಭವ್ ಸೂರ್ಯವಂಶಿಯ ಕುರಿತಾದ ಸ್ಪೋಟಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳು ವೈಭವ್ ಸೂರ್ಯವಂಶಿ ಕುರಿತು ಮಾತನಾಡುತ್ತಾರೆ. ವೈಭವ್ ವಯಸ್ಸು 14 ಅಲ್ಲ 16 ಎಂದು ಇಬ್ಬರು ಹೇಳುತ್ತಾರೆ. ಈ ವಿಡಿಯೋ ಬಳಿಕ ವೈಭವ್ ಸೂರ್ಯವಂಶಿ ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ರಾ ಎಂಬ ಚರ್ಚೆಗಳು ಶುರುವಾಗಿದೆ. ಈ ವಿಡಿಯೋದ ಜೊತೆಯಲ್ಲಿಯೇ ವೈಭವ್ ಸೂರ್ಯವಂಶಿ 2023ರಲ್ಲಿ ನೀಡಿದ ಸಂದರ್ಶನದ ವಿಡಿಯೋ ಕ್ಲಿಪ್ ಸಹ ವೈರಲ್ ಆಗಿದೆ. 

ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ನೋಡಬಹುದು. ನಾವು ಬಿಹಾರದ ಸಮಸ್ತಿಪುರದ ನಿವಾಸಿಗಳು ಎಂದು ಹೇಳುತ್ತಾ ಸುತ್ತಮುತ್ತಲಿನ ಸ್ಥಳವನ್ನು ತೋರಿಸುತ್ತಾರೆ. ಮುಂದೆ ವೈಭವ್ ಸೂರ್ಯವಂಶಿ ನಮ್ಮ ಜೊತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಎಂಬ ವಿಷಯವನ್ನು ನೋಡುಗರೊಂದಿಗೆ ಹೇಳಿಕೊಳ್ಳುತ್ತಾರೆ. ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡುತ್ತಿದ್ರೆ, ನಾವು ಆತನಿಗಾಗಿ ಬೌಲಿಂಗ್ ಮಾಡುತ್ತಿದ್ದೇವು. ವೈಭವ್ ತಂದೆ ಅವರೇ ಮಗನಿಗಾಗಿ ಹೆಚ್ಚು ಶ್ರಮ ಹಾಕಿದ್ದಾರೆ. ಪ್ರತಿದಿನ ಪಾಟ್ನಾಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮನ್ನು ಕರೆದು ನಮಗೆ ಪಾರ್ಟಿ ಕೊಡುತ್ತಿದ್ದರು. ನಾವು ಬೌಲಿಂಗ್ ಮಾಡ್ತಿದ್ರೆ, ವೈಭವ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದನು ಎಂದು ಈ ಇಬ್ಬರು ಹೇಳುತ್ತಾರೆ. 

ಮುಂದುವರಿದು ಮಾತನಾಡುವ ವ್ಯಕ್ತಿ, ವೈಭವ್ ನಿಂತು ನಿಧಾನವಾಗಿ ಆಡುವ ಆಟಗಾರನಲ್ಲ. ಯಾವುದೇ ಪಂದ್ಯವಾಡಿದ್ರೂ ವೈಭವ್ ಮೊದಲ ಎಸೆತದಲ್ಲಿಯೇ ಸಿಕ್ಸ್ ಬಾರಿಸುತ್ತಾನೆ. ನಮ್ಮ ಬಿಹಾರದ ಹುಡುಗ ಐಪಿಎಲ್‌ನಲ್ಲಿ ಚೆನ್ನಾಗಿ ಆಡುತ್ತಿರೋದು ನಮಗೆ ಹೆಮ್ಮೆಯ ವಿಷಯ. ಆದ್ರೆ ಆತ ತನ್ನ ವಯಸ್ಸು 14 ಎಂದು ಹೇಳುತ್ತಿರೋದಕ್ಕೆ ನಮಗೆ ಬೇಸರವಾಗುತ್ತಿದೆ. ಆತ ತನ್ನ ವಯಸ್ಸು 16 ಎಂದು ನಿಜ ಹೇಳಿದ್ದರೆ ನಮಗೆ ಸಂತೋಷವಾಗುತ್ತಿತ್ತು ಎಂದು ಆ ವ್ಯಕ್ತಿ ವಿಡಿಯೋದಲ್ಲಿ ಹೇಳುತ್ತಾನೆ. 

ಇದನ್ನೂ ಓದಿ: ದಾಖಲೆ ಶತಕ ಸಿಡಿಸಿದ ವೈಭವ್‌ಗೆ ಬಂಪರ್; ಹೊಸ ಆಸೆ ಬಿಚ್ಚಿಟ್ಟ ಬಿಹಾರದ 14 ವರ್ಷದ ಕ್ರಿಕೆಟಿಗ!

14 ಅಥವಾ 16; ವಯಸ್ಸಿನ ಬಗ್ಗೆ ಬಿಸಿಬಿಸಿ ಚರ್ಚೆ
ವೈಭವ್ ಸೂರ್ಯವಂಶಿ 2023ರಲ್ಲಿ ನೀಡಲಾದ ಸಂದರ್ಶನದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಈ ಸೆಪ್ಟೆಂಬರ್‌ಗೆ ನನಗೆ 14 ವರ್ಷ ಪೂರ್ಣವಾಗುತ್ತದೆ ಎಂದು ವೈಭವ್ ಸೂರ್ಯವಂಶಿ ವಿಡಿಯೋದಲ್ಲಿ ಹೇಳುತ್ತಾರೆ. ಹಾಗಾಗಿ ವೈಭವ್ ಸೂರ್ಯವಂಶಿ ವಯಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ 101 ರನ್ ಪೇರಿಸಿದ್ದರು. ಇದರಲ್ಲಿ 7 ಬೌಂಡರಿ ಮತ್ತು 11 ಬೃಹತ್ ಸಿಕ್ಸರ್‌ ಸೇರಿವೆ. ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾ ಎಂಬ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ವೈಭಬ್ ಸೂರ್ಯವಂಶಿಗೆ 1.1 ಕೋಟಿ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ಖರೀದಿಸಿದೆ. ಲಖೌನ್ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪನೆ ಮಾಡಿದ್ದರು. ಮುಂಬೈ ವಿರುದ್ಧ ಪಂದ್ಯದಲ್ಲಿ ಸೋತ ಬಳಿಕ ಐಪಿಎಲ್-2025ರ ಪ್ಲೇಆಫ್‌ನಿಂದ ಹೊರಗೆ ಬಿದ್ದಿದೆ.

(ವೈರಲ್ ವಿಡಿಯೋದಲ್ಲಿ ಅಸಭ್ಯ ಪದ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿ ಎಂಬೆಡೆಡ್‌ ಮಾಡಿಲ್ಲ)

ಇದನ್ನೂ ಓದಿ: ಐಪಿಎಲ್‌ನಲ್ಲಿ ಅಬ್ಬರಿಸಿದ್ರೂ 2026ರ ಟಿ20 ವಿಶ್ವಕಪ್‌ನಲ್ಲಿ ವೈಭವ್‌ ಸೂರ್ಯವಂಶಿಗೆ ಸಿಗೋದಿಲ್ಲ ಚಾನ್ಸ್‌!