ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಪ್ಲೇ-ಆಫ್‌ ಹಾದಿಯಲ್ಲಿ ಉಳಿಯಲು ಸನ್‌ರೈಸರ್ಸ್‌ಗೆ ಈ ಪಂದ್ಯದ ಗೆಲುವು ಅನಿವಾರ್ಯ.

ಹೈದರಾಬಾದ್‌: ಸತತ ಗೆಲುವಿನೊಂದಿಗೆ ಈ ಬಾರಿ ಟೂರ್ನಿಗೆ ಕಾಲಿರಿಸಿದ್ದರೂ ಬಳಿಕ ಸೋಲಿನ ಸುಳಿಯಲ್ಲಿ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಜಯದ ಹಳಿಗೆ ಮರಳುವ ಕಾತರದಲ್ಲಿದೆ. ತಂಡ ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಾಡಲಿದೆ. ಸನ್‌ರೈಸರ್ಸ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇಬೇಕಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.

ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಆರಂಭಿಕ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ-4ರಿಂದ ಕೆಳಕ್ಕಿಳಿದಿದೆ. ಆದರೆ ಪ್ಲೇ-ಆಫ್‌ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌, ಗೆಲುವಿನ ಹಳಿಗೆ ಮರಳುವುದರ ಜೊತೆಗೆ ತಂಡದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಫಾಫ್ ಡು ಪ್ಲೆಸಿಸ್ ತಂಡಕ್ಕೆ ಮರಳಿದ್ದರೂ, ಕರುಣ್‌ ನಾಯರ್‌, ಕೆ.ಎಲ್‌.ರಾಹುಲ್‌ ಅಸ್ಥಿರವಾಡುತ್ತಿದ್ದಾರೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಈಗಾಗಲೇ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 7 ಸೋತಿರುವ ತಂಡ, ಡೆಲ್ಲಿ ವಿರುದ್ಧವೂ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫಿಯರ್‌ಲೆಸ್ ಆಟದ ಮೂಲಕವೇ ಫೈನಲ್ ಪ್ರವೇಶಿಸಿ ರನ್ನರ್‌ ಅಪ್ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯ ಟೂರ್ನಿ ಆರಂಭಕ್ಕೂ ಮೊದಲು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಸನ್‌ರೈಸರ್ಸ್‌ ಹೈದರಾಬಾದ್, ಇದೀಗ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸುವ ಮೂಲಕ ಬಹುತೇಕ ಪ್ಲೇ ಆಫ್‌ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಆರೆಂಜ್ ಆರ್ಮಿಯ ಇನ್ನೊಂದು ಸೋಲು ಅಧಿಕೃತವಾಗಿ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಲಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದ್ದರು. ಆದರೆ ಸ್ಥಿರ ಪ್ರದರ್ಶನ ತೋರಲು ಈ ಇಬ್ಬರು ಆಟಗಾರರು ವಿಫಲವಾಗಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಟ್ರ್ಯಾವಿಸ್ ಹೆಡ್ ಕೂಡಾ ಈ ಬಾರಿ ಮ್ಯಾಜಿಕ್ ಮಾಡಲು ವಿಫಲವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸದ್ಯ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 4 ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೊಂದು ಸೋಲು ಡೆಲ್ಲಿ ಪ್ಲೇ ಆಫ್ ಕನಸಿನ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸುವ ಸಾಧ್ಯತೆಯಿದೆ. ಇನ್ನು ಆರೆಂಜ್ ಆರ್ಮಿ 10 ಪಂದ್ಯಗಳಿಂದ 6 ಅಂಕಗಳಿಸಿ 9ನೇ ಸ್ಥಾನದಲ್ಲಿದೆ.

ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ ನೋಡಿ:

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಕಮಿಂಡು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್(ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಝೀಸನ್ ಅನ್ಸಾರಿ, ಮೊಹಮ್ಮದ್ ಶಮಿ.

ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ದುಷ್ಮಂತಾ ಚಮೀರಾ, ಮುಕೇಶ್ ಕುಮಾರ್.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್