ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿ, ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್‌ನಿಂದ ಹೊರಬಿದ್ದಿದೆ. ಕೇವಲ ಒಂದು ಅಂಕ ಗಳಿಸಿದ SRH, ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ ಮೂರನೇ ತಂಡವಾಗಿದೆ.
ಹೈದರಾಬಾದ್: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯಾಕರ್ಷಕ ಬೌಲಿಂಗ್ ದಾಳಿ ನಡೆಸಿ, ಇನ್ನೇನು ಪಂದ್ಯವನ್ನು ಸುಲಭದಲ್ಲಿ ಗೆದ್ದೇ ಬಿಟ್ಟೆವು ಎಂಬಂತಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಮಳೆರಾಯ ಚೇತರಿಸಿಕೊಳ್ಳಲಾಗದ ಶಾಕ್ ಕೊಟ್ಟಿದ್ದಾನೆ. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಮವಾರದ ನಿರ್ಣಾಯಕ ಸೆಣಸಾಟದಲ್ಲಿ ತಂಡಕ್ಕೆ ಗೆಲ್ಲಲೇಬೇಕಿತ್ತು. ಆದರೆ ಅದಕ್ಕೆ ಮಳೆರಾಯ ಬಿಡಲಿಲ್ಲ. ಧಾರಾಕಾರ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತು. ಸುಲಭದಲ್ಲಿ ಗೆದ್ದು 2 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಕೇವಲ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿತು. ಆಡಿರುವ 11 ಪಂದ್ಯಗಳಲ್ಲಿ ಕೇವಲ 7 ಅಂಕ ಸಂಪಾದಿಸಿರುವ ತಂಡ, ನಾಕೌಟ್ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು. ಅತ್ತ ಡೆಲ್ಲಿ ಕೂಡಾ 1 ಅಂಕ ಗಳಿಸಿದರೂ, ತಂಡ 11 ಪಂದ್ಯಗಳಲ್ಲಿ 13 ಅಂಕದೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಇನ್ನೆರಡು ಪಂದ್ಯ ಗೆದ್ದರೂ ತಂಡಕ್ಕೆ ಪ್ಲೇ-ಆಫ್‌ಗೇರಬಹುದು.
ಮಾರಕ ಬೌಲಿಂಗ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಡ ಸನ್‌ರೈಸರ್ಸ್, ಮಾರಕ ದಾಳಿ ಸಂಘಟಿಸಿತು. ನಾಯಕ ಪ್ಯಾಟ್ ಕಮಿನ್ಸ್‌ರ ಬೆಂಕಿ ದಾಳಿಯಿಂದಾಗಿ ಡೆಲ್ಲಿ ವಿಕೆಟ್‌ಗಳು ತರಗೆಲೆಯಂತೆ ಉದುರಿತು. 7.1 ಓವರಲ್ಲಿ 29 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್(ಔಟಾಗದೆ 41), ಅಶುತೋಷ್ ಶರ್ಮಾ(41) ಆಸರೆಯಾದರು. ಕಮಿನ್ಸ್ 4 ಓವರಲ್ಲಿ 19 ರನ್‌ಗೆ 4 ವಿಕೆಟ್ ಕಿತ್ತರು.
ಸುಲಭ ಗುರಿ ಪಡೆದ ಸನ್‌ರೈಸರ್ಸ್ ಚೇಸಿಂಗ್‌ಗೆ ಇಳಿಯುವ ಮುನ್ನ ಮಳೆ ಸುರಿಯಲಾರಂಭಿಸಿತು. ಆ ಬಳಿಕ ಮಳೆ ನಿಂತಿತ್ತು. ರಾತ್ರಿ 11 ಗಂಟೆಗೆ. ಒಂದೂವರೆ ಗಂಟೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು. ಹೀಗಾಗಿ 11.10ರ ವೇಳೆಗೆ ಪಂದ್ಯ ರದ್ದುಗೊಳಿಸಲಾಯಿತು.
ರೇಸ್‌ನಿಂದ 3ನೇ ತಂಡ ಹೊರಕ್ಕೆ
ಈ ಬಾರಿ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ 3ನೇ ತಂಡ ಸನ್‌ರೈಸರ್ಸ್. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಅಧಿಕೃವಾಗಿ ಹೊರಬಿದ್ದಿದ್ದವು. ಸನ್‌ರೈಸರ್ಸ್, ಚೆನ್ನೈಗೆ ಇನ್ನು ತಲಾ 3, ರಾಜಸ್ಥಾನಕ್ಕೆ 2 ಪಂದ್ಯ ಬಾಕಿಯಿದೆ.
ಡೆಲ್ಲಿ ಪ್ಲೇ ಆಫ್ ಲೆಕ್ಕಾಚಾರ ಏನು?:
ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸದ್ಯ 11 ಪಂದ್ಯಗಳನ್ನಾಡಿ 6 ಗೆಲುವು, 4 ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 13 ಅಂಕಗಳನ್ನು ಹೊಂದುವ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿಯೇ ಮುಂದುವರೆದಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡು ಪಂದ್ಯಗಳನ್ನು ಗೆದ್ದರಷ್ಟೇ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಎಚ್ಚರಿಕೆಯ ಹೆಜ್ಜೆಯಿಡುವ ಒತ್ತಡದಲ್ಲಿವೆ.
ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯವನ್ನು ಹೊರತುಪಡಿಸಿ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ತವರಿನಾಚೆಯೇ ಆಡುವುದರಿಂದ ಪ್ಲೇ ಆಫ್‌ಗೇರಲು ಸಾಕಷ್ಟು ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳ ಅಸ್ಥಿರ ಪ್ರದರ್ಶನ ಅಕ್ಷರ್ ಪಟೇಲ್ ತಲೆನೋವು ಹೆಚ್ಚಿಸುವಂತೆ ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ಅಗ್ರಕ್ರಮಾಂಕದ ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ಡೆಲ್ಲಿ ಮ್ಯಾನೇಜ್‌ಮೆಂಟ್ ತಲೆನೋವು ಹೆಚ್ಚಿಸಿದೆ.


