ಐಪಿಎಲ್ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಸೋತ ಗುಜರಾತ್ ನಾಯಕ ಶುಭಮನ್ ಗಿಲ್ ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 3 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಸೋಲಿಗೆ ಕಾರಣ ಎಂದಿದ್ದಾರೆ. ರೋಹಿತ್ ಶರ್ಮಾ ಅವರ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.

ಮೊಹಾಲಿ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋತ ನಂತರ, ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ತಮ್ಮ ಫೀಲ್ಡರ್‌ಗಳ ಕಳಪೆ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗುಜರಾತ್ ಫೀಲ್ಡರ್‌ಗಳು ಮೂರು ಸುಲಭ ಕ್ಯಾಚ್‌ಗಳನ್ನು ಬಿಟ್ಟರು, ಅದರಲ್ಲಿ ಎರಡು ರೋಹಿತ್ ಶರ್ಮಾ ಅವರದ್ದಾಗಿತ್ತು. 81 ರನ್ ಗಳಿಸಿದ ರೋಹಿತ್ ಶರ್ಮಾ ಮುಂಬೈಯನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ವಿಕೆಟ್ ಕೀಪರ್ ಕುಶಾಲ್ ಮೆಂಡಿಸ್ ಮತ್ತು ಜೆರಾಲ್ಡ್ ಕೊಟ್ಜೀ ತಲಾ ಒಂದು ಕ್ಯಾಚ್ ಬಿಟ್ಟರು. ಇದರ ಬಗ್ಗೆಯೇ ಗಿಲ್ ಮಾತನಾಡಿದರು.

ಗಿಲ್ ಹೇಳಿದ್ದಿಷ್ಟು: “ಇದು ಒಂದು ಒಳ್ಳೆಯ ಪಂದ್ಯವಾಗಿತ್ತು. ನಮಗೆ ಗೆಲ್ಲುವ ಭರವಸೆ ಇತ್ತು. ಕೊನೆಯ ಮೂರು-ನಾಲ್ಕು ಓವರ್‌ಗಳಲ್ಲಿ ನಾವು ಬಯಸಿದ ರೀತಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ, ನಾವು ಚೆನ್ನಾಗಿ ಆಡಿದೆವು. ಮೂರು ಸುಲಭ ಕ್ಯಾಚ್‌ಗಳನ್ನು ಬಿಟ್ಟಿರುವುದು ಸಮರ್ಥನೀಯವಲ್ಲ. ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದಾಗ, ಅದು ಬೌಲರ್‌ಗಳ ಮೇಲೂ ಒತ್ತಡ ಹೇರುತ್ತದೆ. ಪರಿಸ್ಥಿತಿ ಅವರ ನಿಯಂತ್ರಣದಲ್ಲಿರುವುದಿಲ್ಲ. ವಿಕೆಟ್ ಪಡೆಯಲು ಕೂಡ ಕಷ್ಟವಾಗುತ್ತದೆ.” ಎಂದು ಹೇಳಿದ್ದಾರೆ.

ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ನೀಡಿದ ಸಂದೇಶವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ತುಂಬಾ ಸರಳವಾಗಿತ್ತು. ನೀವು ಆಡಲು ಬಯಸುವ ರೀತಿಯಲ್ಲಿ ಆಟವಾಡಿ ಎಂದು ಮಾತ್ರ ಹೇಳಿದೆ. ಇಬ್ಬನಿಯಿಂದಾಗಿ ನಮಗೆ ಸ್ವಲ್ಪ ಸುಲಭವಾಯಿತು. ಆದರೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಖಂಡಿತವಾಗಿಯೂ ನಮಗೆ ಬಹಳಷ್ಟು ಸಕಾರಾತ್ಮಕ ಅಂಶಗಳಿವೆ. ಕಳೆದ 2-3 ಪಂದ್ಯಗಳು ನಮ್ಮ ಪರವಾಗಿ ನಡೆಯಲಿಲ್ಲ. ಆದರೆ ಎಲ್ಲಾ ಆಟಗಾರರಿಗೂ, ವಿಶೇಷವಾಗಿ ಸಾಯಿಗೆ ಈ ಸೀಸನ್ ಚೆನ್ನಾಗಿತ್ತು. ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ” ಎಂದು ಗಿಲ್ ಹೇಳಿದರು.

ಗುಜರಾತ್ ಟೈಟಾನ್ಸ್ ಅನ್ನು ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು. ಮುಂಬೈ ಇಂಡಿಯನ್ಸ್ 20 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗೆ 228 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ ಆರು ವಿಕೆಟ್‌ಗೆ 208 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಳೆ ನಡೆಯಲಿರುವ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ಮುಂಬೈಯನ್ನು ಎದುರಿಸಲಿದೆ.

ಪಂದ್ಯದಲ್ಲಿ ಗುಜರಾತ್‌ಗೆ ಕಳಪೆ ಆರಂಭ ದೊರಕಿತು. 67 ರನ್‌ಗಳಿರುವಾಗ ಶುಭಮನ್ ಗಿಲ್ (1) ಮತ್ತು ಕುಶಾಲ್ ಮೆಂಡಿಸ್ (20) ವಿಕೆಟ್ ಕಳೆದುಕೊಂಡಿತು. ನಂತರ ವಾಷಿಂಗ್ಟನ್ ಸುಂದರ್ (48) ಮತ್ತು ಸಾಯಿ ಸುದರ್ಶನ್ (80) ಗುಜರಾತ್‌ಅನ್ನು ಕುಸಿತದಿಂದ ಪಾರು ಮಾಡಿದರು. ಇಬ್ಬರೂ 84 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟ ಗುಜರಾತ್‌ಗೆ ಗೆಲುವಿನ ಆಸೆ ಮೂಡಿಸಿತ್ತು. ಆಗ ಬುಮ್ರಾ ವಾಷಿಂಗ್ಟನ್‌ರನ್ನು ಔಟ್ ಮಾಡಿದರು. ನಂತರ ಗುಜರಾತ್ ಸೋಲಿನತ್ತ ಸಾಗಿತು.

ಕೊನೆಯಲ್ಲಿ ರಾಹುಲ್ ತೆವಾಟಿಯಾ, ಶಾರುಖ್ ಖಾನ್ ಶೆರ್ಫಾನೆ ರುಥರ್‌ಪೋರ್ಡ್ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸಿದ್ದು, ಪಂದ್ಯದ ದಿಕ್ಕೇ ಬದಲಾಗುವಂತೆ ಮಾಡಿತು. ಅಂತಿಮವಾಗಿ ಗುಜರಾತ್ 208 ರನ್ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 56 ರನ್ ನೀಡಿ ದುಬಾರಿಯಾದರೂ 2 ಪ್ರಮುಖ ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನುಳಿದಂತೆ ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್, ಮಿಚೆಲ್ ಸ್ಯಾಂಟ್ನರ್, ಅಶ್ವನಿ ಕುಮಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.