ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ಮತ್ತು ಬೆಂಗಳೂರು ತಂಡಗಳು ಸೆಣಸಲಿವೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯದ ಸಮಸ್ಯೆಯಿಂದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಸ್ಥಾನಕ್ಕೆ ರಿಯಾನ್ ಪರಾಗ್ ನಾಯಕರಾಗಿ ನೇಮಕವಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಸಂಜು ಕೇವಲ ಬ್ಯಾಟರ್ ಆಗಿ ಆಡಲಿದ್ದಾರೆ.
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ಮಾರ್ಚ್ 22ರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ.
ಇನ್ನು ಇದೆಲ್ಲದರ ನಡುವೆ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನವೇ ಬಿಗ್ ಶಾಕ್ ಎದುರಾಗಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್, ಗಾಯದ ಸಮಸ್ಯೆಯಿಂದ ರಾಜಸ್ಥಾನ ರಾಯಲ್ಸ್ ಎದುರು ಆಡಲಿರುವ ಮೊದಲ 3 ಪಂದ್ಯಗಳಿಗೆ ನಾಯಕತ್ವಕ್ಕೆ ಅಲಭ್ಯರಾಗಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000
ರಿಯಾನ್ ಪರಾಗ್ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್:
ಕಳೆದ ಕೆಲ ವರ್ಷಗಳಿಂದ ರಾಜಸ್ಥಾನ ರಾಯಲ್ಸ್ ತಂಡದ ತಾರಾ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ರಿಯಾನ್ ಪರಾಗ್, ಇದೀಗ ರಾಜಸ್ಥಾನ ರಾಯಲ್ಸ್ ಆಡಲಿರುವ ಮೊದಲ ಮೂರು ಐಪಿಎಲ್ ಪಂದ್ಯಗಳಿಗೆ ನಾಯಕರಾಗಿ ನೇಮಕವಾಗಿದ್ದಾರೆ. ಈ ವಿಚಾರವನ್ನು ಸ್ವತಃ ಸಂಜು ಸ್ಯಾಮ್ಸನ್ ಖಚಿತಪಡಿಸಿದ್ದಾರೆ. ರಿಯಾನ್ ಪರಾಗ್ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಸಂಜು ಏಕೆ ನಾಯಕರಾಗ್ತಿಲ್ಲ?:
ಕಳೆದ ನಾಲ್ಕು ಸೀಸನ್ ಐಪಿಎಲ್‌ನಲ್ಲಿ ನಾಯಕನಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದ ಸಂಜು ಸ್ಯಾಮ್ಸನ್‌ಗೆ ಎನ್‌ಸಿಎ ಕೇವಲ ಬ್ಯಾಟಿಂಗ್ ಮಾಡಲಷ್ಟೇ ಅನುಮತಿ ನೀಡಿದೆ. ಆದರೆ ಫೀಲ್ಡಿಂಗ್ ಅಥವಾ ಕ್ಷೇತ್ರರಕ್ಷಕನಾಗಿ ಮೊದಲ ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಸಂಜು ಸ್ಯಾಮ್ಸನ್, ಮೊದಲ ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ಪರ ನಾಯಕನಾಗಿ ಅಲಭ್ಯರಾಗಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಹಂತ ಪ್ರವೇಶಿಸಿತ್ತು. ಪ್ಲೇ ಆಫ್‌ನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿಗೆ ಸೋಲುಣಿಸಿ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಮುಗ್ಗರಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನು ಸಂಜು ಸ್ಯಾಮ್ಸನ್ ನಾಯಕನಾಗಿ ಮಾತ್ರವಲ್ಲದೇ ಆಟಗಾರನಾಗಿಯೂ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕೇರಳ ಮೂಲದ ಬಲಗೈ ಬ್ಯಾಟರ್ ಸಂಜು 153.47ರ ಬ್ಯಾಟಿಂಗ್ ಸರಾಸರಿಯಲ್ಲಿ 531 ರನ್ ಸಿಡಿಸಿ ಮಿಂಚಿದ್ದರು.
