ಕೆಕೆಆರ್ ವಿರುದ್ಧದ ಐಪಿಎಲ್ 2025 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಹಲವು ಆವೃತ್ತಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಈ ಸಲಾ ನಮ್ದೆ  ಆಟ, ನಮ್ಗೆ ಕಿರೀಟ.

ಕೋಲ್ಕತಾ(ಮಾ.22) ಐಪಿಎಲ್ 2025 ಟೂರ್ನಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿ ಗೆಲುವಿನ ಆರಂಭ ಪಡೆದಿದೆ ಕಳೆದ ಹಲವು ಆವೃತ್ತಿಗಳಲ್ಲಿ ಆರ್‌ಸಿಬಿ ಅದ್ಭುತ ಗೆಲುವಿನ ಉಡುಗೊರೆಯನ್ನು ಅಭಿಮಾನಿಗಳಿಗೆ ನೀಡಿದೆ. ಆದರೆ ಈ ಬಾರಿಯ ಆರ್‌ಸಿಬಿಯ ಆಟ, ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಆರ್‌ಸಿಬಿ 7 ವಿಕೆಟ್ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಕೆಕೆಆರ್ ನೀಡಿದ 175 ರನ್ ಟಾರ್ಗೆಟ್ ಚೇಸ್ ಮಾಡಿದ ಆರ್‌ಸಿಬಿ ವಿಕೆಟ್ 3 ಕಳೆದುಕೊಂಡು ಗುರಿ ತಲುಪಿದೆ. 

ಐಪಿಎಲ್ 2025 ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಗೆಲುವಿನ ಅಂಕ ಪಡೆದುಕೊಂಡಿದೆ. ಬೌಲಿಂಗ್‌ನಲ್ಲೂ ಆರ್‌ಸಿಬಿ ಉತ್ತಮ ದಾಳಿ ಸಂಘಟಿಸಿ ನಿಯಂತ್ರಿಸಿದರೆ ಬ್ಯಾಟಿಂಗ್‌ನಲ್ಲೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ನೀಡಿದ ಪ್ರದರ್ಶನದಿಂದ ಈ ಸಲಾ ನಮ್ದೆ ಆಟ, ನಮ್ಗೇ ಕಿರೀಟ ಎಂದು ಅಭಿಮಾನಿಗಳ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆರ್‌ಸಿಬಿಗೆ 175 ರನ್ ಟಾರ್ಗೆಟ್
ಚೇಸಿಂಗ್ ಇಳಿದ ಆರ್‌ಸಿಬಿ ಅಬ್ಬರಕ್ಕೆ ಕೆಕೆಆರ್ ಕಂಗಾಲಾಗಿತ್ತು. ಕಾರಣ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭ ಭರ್ಜರಿಯಾಗಿತ್ತು. ಭರ್ಜರಿ ಬೌಂಡರಿ ಹಾಗೂ ಸಿಕ್ಸರ್ ಆರ್‌ಸಿಬಿ ರನ್‌ರೇಟ್ ಉತ್ತಮಪಡಿಸಿತ್ತು. ಫಿಲಿಪ್ ಸಾಲ್ಟ್ ಹಾಫ್ ಸೆಂಚುರಿ ಮೂಲಕ ಅಬ್ಬರಿಸಿದರು. ಸಾಲ್ಟ್ 56 ರನ್ ಸಿಡಿಸಿ ನಿರ್ಗಮಿಸಿದರು. ಮೊದಲ ವಿಕೆಟ್‌ಗೆ ಕೊಹ್ಲಿ ಹಾಗೂ ಸಾಲ್ಟ್ 95 ರನ್ ಜೊತೆಯಾಟ ನೀಡಿತ್ತು.

ಇನ್ನು ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ ನಿರೀಕ್ಷಿತ ಜೊತೆಯಾಟ ನೀಡಲಿಲ್ಲ. ಪಡಿಕ್ಕಲ್ 10 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ವಿರಾಟ್ ಕೊಹ್ಲಿ ಅಬ್ಬರಿಸಿ ಹಾಫ್ ಸೆಂಚುರಿ ಪೂರೈಸಿದರು. ನಾಯಕ ರಜತ್ ಪಾಟಿದಾರ್ ಹಾಗೂ ಕೊಹ್ಲಿ ಜೊತೆಯಾಟ ಆರ್‌ಸಿಬಿ ಗೆಲುವು ಖಚಿತಪಡಿಸಿತ್ತು. ನಾಯಕನಾಗಿ ರಜತ್ ಪಾಟಿದಾರ್ ಉತ್ತಮ ಹೋರಾಟ ನೀಡಿದರು. ಕೇವಲ 16 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು.

ವಿರಾಟ್ ಕೊಹ್ಲಿ ಚೇಸಿಂಗ್ ಮಾಸ್ಟರ್ ಅನ್ನೋದು ಮತ್ತೊಮ್ಮೆ ಸಾಬೀತು ಪಡಿಸಿದರು. ಕೊಹ್ಲಿ ಹೋರಾಟ ಮುಂದುವರಿಯಿತು. ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆ ಸೇರಿದ ವಿರಾಟ್ ಕೊಹ್ಲಿ ಉತ್ತಮ ರನ್ ಕಲೆ ಹಾಕಿದರು. ಕೊಹ್ಲಿ ಅಜೇಯ 59 ರನ್ ಸಿಡಿಸಿದರೆ, ಲಿವಿಂಗ್‌ಸ್ಟೋನ್ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 16.2 ಓವರ್‌ಗಳಲ್ಲಿ ಗುರಿ ತಲುಪಿದೆ.