ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಈಗಾಗಲೇ ಎರಡು ಗೆಲುವು ಸಾಧಿಸಿರುವ ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿರಲು ಬಯಸಿದೆ. ಆರಂಭಿಕ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯ ಒತ್ತಡ ಕಡಿಮೆ ಮಾಡಿಕೊಳ್ಳುವುದು ತಂಡದ ಗುರಿಯಾಗಿದೆ. ಪಂದ್ಯಕ್ಕೂ ಮುನ್ನ ವಿಜಯ್ ಪ್ರಕಾಶ್ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು: ತವರಿನಾಚೆ ಎರಡು ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ, ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲು ಕಾತರಿಸುತ್ತಿದೆ. ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲು ಸಜ್ಜಾಗಿರುವ ಆರ್‌ಸಿಬಿ, ಹ್ಯಾಟ್ರಿಕ್ ಜಯದ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯುವ ಗುರಿ ಹಾಕಿಕೊಂಡಿದೆ.

ಆರಂಭದಲ್ಲಿ ಆರ್‌ಸಿಬಿಗೆ ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಹೆಚ್ಚು ದಿನಗಳ ಸಮಯವಿ ದ್ದರೂ, ಟೂರ್ನಿ ಸಾಗಿದಂತೆ ದಿನಗಳ ನಡುವಿನ ಅಂತರ ಕಡಿಮೆಯಾಗಲಿದೆ. ಒಂದು ಹಂತದಲ್ಲಿ 22 ದಿನಗಳಲ್ಲಿ 7 ಸಲ ಪ್ರಯಾಣಿಸಿ 7 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ, ಆರಂಭಿಕ ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯ ಒತ್ತಡ ತನ್ನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಆರ್‌ಸಿಬಿ ಮುಂದಿರುವ ಗುರಿ. ಹಿಂದಿನ ಆವೃತ್ತಿಗಿಂತ ಹೆಚ್ಚು ಸಮತೋಲಿತವಾಗಿ ಕಾಣುತ್ತಿರುವ ಆರ್‌ಸಿಬಿ ಈ ಬಾರಿ ತನ್ನ ಆಟಗಾರರಿಗೆ ಅವರವರ ಪಾತ್ರದ ಬಗ್ಗೆ ಸಂಪೂರ್ಣವಾಗಿ ಮನದಟ್ಟು ಮಾಡಿಸಿದಂತಿದೆ.

ಇದನ್ನೂ ಓದಿ: ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಕಿಂಗ್ ಕೊಹ್ಲಿ! ಫ್ಯಾನ್ಸ್‌ಗಿದು ಗುಡ್‌ ನ್ಯೂಸ್!

ಕಳೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆಡಿದ ರೀತಿ ತಂಡದ ಉದ್ದೇಶವನ್ನು ಬಹಿರಂಗಪಡಿಸಿತು. ಚೆಪಾಕ್‌ನ ಪಿಚ್‌ನಲ್ಲಿ ರನ್ ಗಳಿಸಲು ಕಷ್ಟಪಟ್ಟಿದ್ದ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಅಂಗಳದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುವುದನ್ನು ನೋಡಲುಅಭಿಮಾನಿಗಳು ಕಾಯುತ್ತಿದ್ದಾರೆ. ರಜತ್ ಪಾಟೀದಾರ್ ತಮ್ಮ ಬ್ಯಾಟಿಂಗ್ ಅಬ್ಬರದ ಜೊತೆ ನಾಯಕತ್ವದಲ್ಲೂ ಫುಲ್ ಮಾರ್ಕ್‌ ಪಡೆಯುತ್ತಿದ್ದಾರೆ. ಸಾಲ್ಟ್, ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಪೈಕಿ ಯಾರೊಬ್ಬರು ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಂತರೂ, ಚೆಂಡು ಅದೆಷ್ಟು ಬಾರಿ ಪಕ್ಕದ ಕಬ್ಬನ್ ಪಾರ್ಕ್‌ಗೆ ಹೋಗಿ ಬೀಳುತ್ತದೆಯೋ?

ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಒಂದು ಬದಲಾ ವಣೆ ಮಾಡುವ ಸಾಧ್ಯತೆ ಇದೆ. ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಬದಲು ವೇಗಿ ರಸಿಖ್ ಸಲಾಂ ಅಥವಾ ಎಡಗೈ ಸ್ಪಿನ್ನರ್ ಸ್ಟಪ್ಟಿಲ್ ಸಿಂಗ್‌ರನ್ನು ಆಡಿಸಬಹುದು. ಉಳಿದಂತೆ ಇನ್ಯಾವ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಕಂಡು ಬರುತ್ತಿಲ್ಲ.

ಇದನ್ನೂ ಓದಿ: ,ಮೈದಾನದಲ್ಲೇ ಮತ್ತೆ ಕಿರಿಕ್ ಮಾಡಿದ ಗೋಯೆಂಕಾ; ರಾಹುಲ್ ಬಳಿಕ ಪಂತ್‌ ಮೇಲೂ ಸಿಡಿಮಿಡಿ!

ಮತ್ತೊಂದೆಡೆ ಗುಜರಾತ್ ಕೆಲ ಪ್ರಮುಖ ಆಟಗಾರರ ಮೇಲೆ ಹೆಚ್ಚು ಅವಲಂಬಿತಗೊಂಡಂತೆ ಕಾಣಿಸುತ್ತಿದೆ. ಶುಭಮನ್ ಗಿಲ್, ಜೋಸ್ ಬಟ್ಲರ್, ರಶೀದ್ ಖಾನ್ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಕರ್ನಾಟಕದ ಪ್ರಸಿದ್ಧ ಕೃಷ್ಣ ತವರಿನಂಗಳದಲ್ಲಿ ಆರ್‌ಸಿಬಿಗೆ ಆಘಾತ ನೀಡಲು ಕಾತರಿಸುತ್ತಿದ್ದಾರೆ. 7 ವರ್ಷ ಆರ್‌ಸಿಬಿಯಲ್ಲಿದ್ದ ಮೊಹಮದ್ ಮೊಹಮ್ಮದ್ ಸಿರಾಜ್ ಕೂಡ ಈಗ ಗುಜರಾತ್‌ನ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದು, ಅವರ ಮೇಲೂ ತಂಡ ನಿರೀಕ್ಷೆ ಇಟ್ಟುಕೊಂಡಿದೆ.

ಪಂದ್ಯಕ್ಕೂ ಮುನ್ನ ಸಮಾರಂಭ: ವಿಜಯ್‌ ಪ್ರಕಾಶ್ ಗಾಯನ

ಬಿಸಿಸಿಐ ಈ ಬಾರಿ ಐಪಿಎಲ್‌ಗೆ ಆತಿಥ್ಯ ವಹಿ ಸುವ ಎಲ್ಲಾ 13 ನಗರಗಳಲ್ಲೂ ಉದ್ಘಾಟನಾ ಸಮಾರಂಭ ನಡೆಸಲು ನಿರ್ಧರಿಸಿದ್ದು, ಬೆಂಗಳೂರಲ್ಲೂ ಬುಧವಾರ ಪಂದ್ಯಕ್ಕೂ ಮುನ್ನ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂಗೀತ ಸುಧೆ ಹರಿಸಲಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.

ಪಂದ್ಯ: ಸಂಜೆ 7.30ಕ್ಕೆ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್