ತವರಿನಲ್ಲಿ ಸತತ ಸೋಲಿನಿಂದ ಬಳಲುತ್ತಿರುವ ಆರ್‌ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ಲಯ ಕಂಡುಕೊಳ್ಳುವುದು ಆರ್‌ಸಿಬಿಗೆ ಸವಾಲಾಗಿದೆ.
ಬೆಂಗಳೂರು: ತವರಿನಲ್ಲಿ ಜಯದ ಸಿಹಿ ಸವಿಯಲು ಹಪಹಪಿಸುತ್ತಿರುವ ಆರ್‌ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಲಯ ಕಳೆದುಕೊಂಡು ಪರದಾಡುತ್ತಿರುವ ರಾಜಸ್ಥಾನವನ್ನು ಬಗ್ಗುಬಡಿದು, ಚಿನ್ನಸ್ವಾಮಿ ಮೊದಲ ಜಯ ಸಾಧಿಸುವ ಮೂಲಕ ಒಟ್ಟಾರೆ 6ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ- 3ರಲ್ಲೇ ಉಳಿಯುವುದು ಆರ್‌ಸಿಬಿ ಮುಂದಿರುವ ಗುರಿ.
ಪ್ಲೇ-ಆಫ್ ಸ್ಥಾನಕ್ಕಾಗಿ ಪೈಪೋಟಿ ತೀವ್ರ ಗೊಳ್ಳುತ್ತಿರುವ ಹೊತ್ತಲ್ಲಿ ಪ್ರತಿ ಅಂಕವೂ ನಿರ್ಣಾಯಕವೆನಿಸಲಿದ್ದು, ತವರಿನಲ್ಲಿ ಗೆಲುವು ಸಾಧಿಸಿದರೆ ಸಹಜವಾಗಿಯೇ ತಂಡದ ಆತ್ಮವಿಶ್ವಾಸ ವೃದ್ಧಿಸಲಿದೆ. ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢದಲ್ಲಿ ಅಮೋಘ ಗೆಲುವು ಸಾಧಿಸಿರುವ ಆರ್‌ಸಿಬಿ, ಚಿನ್ನಸ್ವಾಮಿ ಅಂಗಳದಲ್ಲಿ ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ತೋರಿದೆ. ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರೆ, ಬೌಲರ್‌ಗಳು ಸರಿಯಾದ ಲೈನ್, ಲೆಂಥ್‌ನಲ್ಲಿ ಬೌಲ್ ಮಾಡಲು ಕಷ್ಟಪಡುತ್ತಿದ್ದಾರೆ. ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಯಲ್ಪಡುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಆಡಿರುವ ಮೂರೂ ಪಂದ್ಯಗಳಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ ಕ್ರಮವಾಗಿ 169/8, 163/7, 95/9(14 ಓವರ್) ಮೊತ್ತ ದಾಖಲಿಸಿದೆ.
ಇದನ್ನೂ ಓದಿ: ,ಪಹಲ್ಗಾಮ್ ದಾಳಿ ಬೆನ್ನಲ್ಲೇ ISIS ಕಾಶ್ಮೀರ್ ಉಗ್ರರಿಂದ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ
ತವರಿನಾಚೆ 9-10 ರನ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಆರ್‌ಸಿಬಿಯ ರನ್ ರೇಟ್ ತವರಿನಲ್ಲಿ 7-8 ಅಷ್ಟೇ ಇದೆ. ಬ್ಯಾಟಿಂಗ್ ಆಧಾರಸ್ತಂಭ ಕೊಹ್ಲಿ ಈ ವರ್ಷ ತೃಪ್ತಿಕರ ಲಯದಲ್ಲಿದ್ದು, 640 ಸರಾಸರಿ ಹೊಂದಿದ್ದಾರೆ. ಆದರೆ, ಫಿಲ್ ಸಾಲ್ಟ್. ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್ ತಮ್ಮ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಪಿಚ್‌ನಲ್ಲಿನ ಅಸ್ಥಿರ ಬೌನ್ಸ್ ಪವರ್ -ಪ್ಲೇ ಬಳಿಕ ಆರ್‌ಸಿಬಿ ಬ್ಯಾಟರ್ ಗಳನ್ನು ನಿಯಂತ್ರಿಸುತ್ತಿದ್ದು, ರಾಜಸ್ಥಾನ ವಿರುದ್ದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಇನ್ನು ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ ಮೇಲೆ ಬೌಲಿಂಗ್ ಜವಾಬ್ದಾರಿ ಇದೆ.
ಸಮಸ್ಯೆ ಸುಳಿಯಲ್ಲಿ ಆರ್‌ಆರ್: ರಾಜಸ್ಥಾನದ ಡ್ರೆಸ್ಸಿಂಗ್ ರೂಂ ಸಮಸ್ಯೆಗಳ ಆಗರವಾಗಿದ್ದು, ತಂಡ ಸಂಕಷ್ಟದಲ್ಲಿದೆ. ಸಂಜು ಸ್ಯಾಮ್ಸನ್ ಗಾಯಗೊಂಡಿದ್ದು, ಈ ಪಂದ್ಯದಲ್ಲಿ ಆಡುವುದಿಲ್ಲ. ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದು, ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ತಂಡ ಬಾಕಿ ಇರುವ 6 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಾದರೂ ಗೆಲ್ಲಲೇಬೇಕು. ಹೀಗಾಗಿ, ಭಾರೀ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಐಪಿಎಲ್‌ಗೆ ಕಾಲಿಟ್ಟ 14 ವರ್ಷದ ವೈಭವ್ ಸೂರ್ಯ ವಂಶಿ ಮೇಲೆ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಕಣ್ಣಿಡಲಿದ್ದಾರೆ.
ಇದನ್ನೂ ಓದಿ: ಲಖನೌ ಎದುರು ಮ್ಯಾಚ್ ಫಿಕ್ಸಿಂಗ್ ಮಾಡ್ತಾ ರಾಜಸ್ಥಾನ ರಾಯಲ್ಸ್? ಮತ್ತೆ ಬ್ಯಾನ್ ಆಗುತ್ತಾ?
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಈ ಬಾರಿ ಚಿನ್ನಸ್ವಾಮಿ ಪಿಚ್ ಬ್ಯಾಟರ್‌ಗಳ ಬದಲು ಬೌಲರ್‌ಗಳಿಗೆ ನೆರವು: ಕುಂಬ್ಳೆ
ನವದೆಹಲಿ: 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಈ ಐಪಿಎಲ್‌ನಲ್ಲಿ ಬ್ಯಾಟರ್ ಬದಲು ಬೌಲರ್‌ಗಳಿಗೆ ನೆರವಾಗುತ್ತಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.ಜಿಯೋ ಹಾಟ್‌ಸ್ಟಾರ್ ಆಯೋಜಿಸಿದ್ದ ರಿವೇಂಜ್ ವೀಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಂಬ್ಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲಖನೌ ಎದುರು ಮ್ಯಾಚ್ ಫಿಕ್ಸಿಂಗ್ ಮಾಡ್ತಾ ರಾಜಸ್ಥಾನ ರಾಯಲ್ಸ್? ಮತ್ತೆ ಬ್ಯಾನ್ ಆಗುತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರು ನೆಲದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದರು. 'ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಮಾನ್ಯವಾಗಿ 200ಕ್ಕಿಂತ ಕಡಿಮೆ ಸ್ಕೋರ್ ಇರುವುದು ಸುರಕ್ಷಿತವಲ್ಲ. ಆದರೆ ಈ ವರ್ಷ ಪಿಚ್ ಸ್ವಲ್ಪ ಸ್ಪಾಂಜ್ ನಂತಿದೆ ಮತ್ತು ಜಿಗುಟಾಗಿದೆ. ಇದರಿಂದ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಸಿಗುವುದಿಲ್ಲ. ಆದರೆ ಇದು ಬೌಲರ್ಸ್‌ಗಳಿಗೆ ಒಂದು ರೀತಿ ಅನುಕೂಲ' ಎಂದು ಅವರು ಹೇಳಿದ್ದಾರೆ.
