ಬೆಂಗಳೂರಿನಲ್ಲಿ ಐಪಿಎಲ್ 2025ರ ಆರ್‌ಸಿಬಿ ಪಂದ್ಯಗಳ ದಿನಗಳಲ್ಲಿ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಿಸಲಾಗಿದೆ. ಏಪ್ರಿಲ್ 2, 10, 18, 24 ಮತ್ತು ಮೇ 3, 13, 17 ರಂದು ಈ ಸೇವೆ ಲಭ್ಯವಿರುತ್ತದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಮಧ್ಯರಾತ್ರಿ 1.15ಕ್ಕೆ ಹೊರಡಲಿದೆ. ಆದರೆ, ಚೆನ್ನೈ ಮೆಟ್ರೋ ಆರ್‌ಸಿಬಿ-ಸಿಎಸ್‌ಕೆ ಪಂದ್ಯ ವೀಕ್ಷಕರಿಗೆ ಉಚಿತ ಸಂಚಾರ ನೀಡಿತ್ತು.
ಬೆಂಗಳೂರು (ಏ.01): ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಆರ್‌ಸಿಬಿ ಪಂದ್ಯಗಳು ನಡೆಯುವ 7 ದಿನಗಳ ಕಾಲ ನಮ್ಮ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿ 12.30ರವರೆಗೆ ವಿಸ್ತರಣೆ ಮಾಡಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಆದರೆ, ಚೆನ್ನೈನಲ್ಲಿ ನಡೆದ ಆರ್‌ಸಿಬಿ-ಸಿಎಸ್‌ಕೆ ಪಂದ್ಯವನ್ನು ವೀಕ್ಷಣೆ ಮಾಡಲು ಬರುವ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನೈ ಮೆಟ್ರೋ ಟಿಕೆಟ್ ಫ್ರೀ ಸಂಚಾರ ಸೇವೆಯನ್ನು ನೀಡಿತ್ತು.
ಹೌದು, ಮಾ.28ರ ಶುಕ್ರವಾರ ತಮಿಳುನಾಡಿನ ರಾಜಧಾನಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ (RCB-CSK) ಪಂದ್ಯ ವೀಕ್ಷಣೆಗೆ ಹೋಗುವ ಎಲ್ಲ ಕ್ರಿಕೆಟ್ ಅಭಿಮಾಣಿಗಳಿಗೆ ಚೆನ್ನೈ ಮೆಟ್ರೋದಿಂದ ಉಚಿತ ಸೇವೆಯನ್ನು ನೀಡಲಾಗಿತ್ತು. ಸಿಎಸ್‌ಕೆ ಪಂದ್ಯ ವೀಕ್ಷಿಸಲು ಹೋಗುವ ಟಿಕೆಟ್ ಇದ್ದರೆ ಸಾಕು ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ನಮ್ಮ ಮೆಟ್ರೋದಿಂದ ಜನರಿಗೆ ಬೆಲೆ ಏರಿಕೆ ಬರೆ ಎಳೆಯುವುದು ಬಿಟ್ಟರೆ ಬೇರೆ ಕೊಡುಗೆ ನೀಡುವ ಯಾವುದೇ ಚಿಂತನೆ ಇದ್ದಂತಿಲ್ಲ.
ಇದನ್ನೂ ಓದಿ: ಚೆನ್ನೈ: ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚಿಗೆ ಫ್ರೀ ಮೆಟ್ರೋ ಟಿಕೆಟ್! ನಮ್ಮ ಮೆಟ್ರೋ ನಡೆ ಏನಾಗಬಹುದು?
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಬೆಂಗಳೂರಿನಲ್ಲಿ ನಡೆಯಲಿರುವ TATA IPL T-20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ, ನಮ್ಮ ಮೆಟ್ರೋ ದಿನಾಂಕ 02, 10, 18, ಹಾಗೂ 24ನೇ ಏಪ್ರಿಲ್ ಮತ್ತು 03, 13 ಹಾಗೂ 17ನೇ ಮೇ, 2025 ರಂದು ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ. ಕ್ರಿಕೆಟ್ ಪ್ರೇಮಿಗಳು ನಮ್ಮ ಮೆಟ್ರೋದ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದೆ.
