ಮಳೆ ಬಾಧಿತ ತವರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಆರ್‌ಸಿಬಿ ಮತ್ತೆ ಪಂಜಾಬ್ ವಿರುದ್ಧ ಸೆಣಸಲಿದೆ. ತವರಿನಾಚೆ 4 ಪಂದ್ಯಗಳಲ್ಲಿ ಜಯಗಳಿಸಿರುವ ಆರ್‌ಸಿಬಿ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಆದರೆ, ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ತಲೆನೋವು ತಂದಿದೆ.
ಮುಲ್ಲಾನ್‌ಪುರ(ಪಂಜಾಬ್): ಮಳೆ ಬಾಧಿತ ತವರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತು ಇನ್ನೂ 2 ದಿನಗಳಾಗಿಲ್ಲ. ಆರ್‌ಸಿಬಿ ಮತ್ತೆ ಪಂಜಾಬ್ ವಿರುದ ಸೆಣಸಾಡಲಿದ್ದು, ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಈ ಬಾರಿ ಪಂದ್ಯಕ್ಕೆ ಪಂಜಾಬ್‌ನ ತವರು ಮೈದಾನ ಮುಲ್ಲಾನ್‌ಪುರ ಆತಿಥ್ಯ ವಹಿಸಲಿದೆ.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ತವರಿನಾಚೆ ಆರ್‌ಸಿಬಿ 4 ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳಲ್ಲೂ ಜಯಗಳಿಸಿದೆ. ಇದೇ ಆತ್ಮವಿಶ್ವಾಸದಲ್ಲಿ ಆರ್‌ಸಿಬಿ ಭಾನುವಾರವೂ ಕಣಕ್ಕಿಳಿಯಲಿದೆ. ಆರ್‌ಸಿಬಿ ಬೌಲಿಂಗ್ ವಿಭಾಗ ಉತ್ತಮವಾಗಿದ್ದರೂ ಈ ಬಾರಿ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದೆ. ವಿರಾಟ್‌ಗೆ ಇತರ ಬ್ಯಾಟರ್‌ಗಳಿಂದ ಬೆಂಬಲ ಸಿಗುತ್ತಿಲ್ಲ. ನಾಯಕ ರಜತ್ ದೊಡ್ಡ ಮೊತ್ತ ಹಾಕಲು ವಿಫಲರಾಗುತ್ತಿದ್ದಾರೆ. ಆದರೆ ಟಿಮ್ ಡೇವಿಡ್ ಸ್ಪೋಟಕ ಆಟ ತಂಡದ ಪ್ಲಸ್ ಪಾಯಿಂಟ್.
ಆರ್‌ಸಿಬಿ ತಂಡದ ಪರ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿಕೊಡಬೇಕಿದೆ.ಇದರ ಜತೆಗೆ ಇಂದಿನ ಪಂದ್ಯದಲ್ಲಿ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾ ಬಂದಿರುವ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ವಿಶ್ರಾಂತಿ ನೀಡಿ ಜೇಕೊಬ್ ಬೆಥೆಲ್ ಇಲ್ಲವೇ ರೊಮ್ಯಾರಿಯೋ ಶೆಫರ್ಡ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕುವ ಸಾಧ್ಯತೆಯಿದೆ.
ವೈಭವ್ ಸೂರ್ಯವಂಶಿ 14 ವರ್ಷಕ್ಕೆ ಐಪಿಎಲ್ ಪಾದಾರ್ಪಣೆ: ಮೊದಲ ಪಂದ್ಯದಲ್ಲಿ 2 ಬೌಂಡರಿ, 3 ಸಿಕ್ಸ್!
ಬೌಲಿಂಗ್‌ನಲ್ಲಿ ಜೋಶ್ ಹೇಜಲ್ ವುಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ ಮತ್ತಷ್ಟು ಪರಿಣಾಮಕಾರಿ ದಾಳಿ ಸಂಘಟಿಸಬೇಕಾದ ಅಗತ್ಯವಿದೆ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆಯಿದೆ.
ಗೆಲುವಿನ ಆತ್ಮವಿಶ್ವಾಸ: ಚಿನ್ನಸ್ವಾಮಿಯಲ್ಲೇ ಆರ್‌ಸಿಬಿಯನ್ನು ಮಣಿಸಿರುವ ಪಂಜಾಬ್ ಕಿಂಗ್ಸ್ ಅದೇ ಆತ್ಮವಿಶ್ವಾಸದಲ್ಲಿ ತನ್ನ ತವರಿನಲ್ಲೂ ಆಡಲಿದೆ. ತಂಡ ಆಡಿರುವ 7ರಲ್ಲಿ 5 ಪಂದ್ಯ ಗೆದ್ದಿದೆ. ನಾಯಕ ಶ್ರೇಯಸ್, ಯುವ ಆಟಗಾರರಾರ ಪ್ರಿಯಾನ್ಸ್ ಆರ್ಯಾ, ಪ್ರಭ್ ಸಿಮ್ರನ್ ಸಿಂಗ್, ನೇಹಲ್ ವಧೇರಾ ತಂಡದ ಆಧಾರಸ್ತಂಭ, ಬೌಲಿಂಗ್‌ನಲ್ಲಿ ಯುಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್ ಮೊನಚು ದಾಳಿ ಸಂಘಟಿಸುತ್ತಿದ್ದಾರೆ.
IPL 2025: ಸಿಎಸ್‌ಕೆಗೆ ಹೊಸ ನಾಯಕ? ಧೋನಿಗೆ ಏನಾಯ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ? ಹಾಗೆಯೇ ತವರಿನಾಚೆಯೇ ರಜತ್ ಪಾಟೀದಾರ್ ಪಡೆ 5ನೇ ಗೆಲುವು ಸಾಧಿಸುವ ಮೂಲಕ ಜಯದ ಟ್ರ್ಯಾಕ್‌ಗೆ ಮರಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸೂಪರ್ ಸಂಡೆಯ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಭರಪೂರ ಮನರಂಜನೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಸುಯಶದ ಶರ್ಮಾ, ಕೃನಾಲ್ ಪಾಂಡ್ಯ, ಯಶ್ ದಯಾಳ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್.
ಪಂಜಾಬ್ ಕಿಂಗ್ಸ್: ಪ್ರಿಯಾನ್ಶ್ ಆರ್ಯಾ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ನೇಹಲ್ ವಧೇರಾ, ಜೋಶ್ ಇಂಗ್ಲಿಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಯಾನ್ಸೆನ್, ಶಶಾಂಕ್ ಸಿಂಗ್, ಬಾರ್ಟ್‌ಲೆಟ್, ಹರ್‌ಪ್ರೀತ್ ಬ್ರಾರ್, ಯುಜುವೇಂದ್ರ ಚಹಲ್, ಅರ್ಶದೀಪ್ ಸಿಂಗ್.
ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿ. ಈ ಐಪಿಎಲ್‌ನ 6 ಇನ್ನಿಂಗ್ಸ್‌ಗಳ ಪೈಕಿ 3ರಲ್ಲಿ 200+ ರನ್ ದಾಖಲಾಗಿವೆ. ಆದರೆ ಕೊನೆ ಪಂದ್ಯದಲ್ಲಿ ಪಂಜಾಬ್ 111 ರನ್ ಗಳಿಸಿದ್ದರೆ, ಕೆಕೆಆರ್ 95ಕ್ಕೆ ಆಲೌಟಾಗಿತ್ತು. ಈ ವರ್ಷದ 3 ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.
