ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 156 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಪ್ರಿಯಾನ್ಶ್ ಆರ್ಯಾ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಉತ್ತಮ ಆರಂಭ ಒದಗಿಸಿದರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು.
ಮುಲ್ಲಾನ್‌ಪುರ: ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಹಾಗೂ ಸುಯಾಶ್ ಶರ್ಮಾ ಮಾರಕ ದಾಳಿಯ ನೆರವಿನಿಂದ ಆತಿಥೇಯ ಪಂಜಾಬ್ ಬ್ಯಾಟರ್‌ಗಳನ್ನು ಆರ್‌ಸಿಬಿ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 6 ವಿಕೆಟ್ ಕಳೆದುಕೊಂಡು 156 ರನ್‌ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಆರ್‌ಸಿಬಿಗೆ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ.
ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟರ್‌ಗಳಾದ ಪ್ರಿಯಾನ್ಶ್ ಆರ್ಯಾ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 4.2 ಓವರ್‌ಗಳಲ್ಲಿ 42 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು. 22 ರನ್ ಗಳಿಸಿದ್ದ ಪ್ರಿಯಾನ್ಶ್ ಆರ್ಯಾ ಹಾಗೂ 33 ರನ್ ಗಳಿಸಿದ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಬಲಿ ಪಡೆಯುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು.
ಇನ್ನು ಲಿಯಾಮ್ ಲಿವಿಂಗ್‌ಸ್ಟೋನ್ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ರೊಮ್ಯಾರಿಯೋ ಶೆಫರ್ಡ್ ತಾವೆಸೆದ ಮೊದಲ ಓವರ್‌ನಲ್ಲೇ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಕಳೆದ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣವಾಗಿದ್ದ ನೆಹಾಲ್ ವದೇರಾ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು 29 ರನ್ ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಒಂದು ರನ್ ಗಳಿಸಿದ ಮಾರ್ಕಸ್ ಸ್ಟೋನಿಸ್ ಅವರನ್ನು ಒಂದೇ ಓವರ್‌ನಲ್ಲಿ ಬಲಿ ಪಡೆಯುವಲ್ಲಿ ಸುಯಾಶ್ ಶರ್ಮಾ ಯಶಸ್ವಿಯಾದರು.
