ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ. ಹೈದರಾಬಾದ್ 8 ವಿಕೆಟ್‌ಗೆ 143 ರನ್ ಗಳಿಸಿದರೆ, ಮುಂಬೈ 15.4 ಓವರ್‌ಗಳಲ್ಲಿ ಗುರಿ ತಲುಪಿತು. ರೋಹಿತ್ ಶರ್ಮಾ 70 ರನ್ ಗಳಿಸಿ ಮಿಂಚಿದರು.
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್‌ನ ಸೋಲಿನ ಸರಪಳಿ ಕಳಚುವ ಲಕ್ಷಣಗಳು ಕಂಡುಬರುತ್ತಿಲ್ಲ. ಬುಧವಾರ ಮುಂಬೈ ಇಂಡಿಯನ್ಸ್ ಆರ್ಭಟಕ್ಕೆ ಸನ್‌ರೈಸರ್ಸ್ ಅಕ್ಷರಶಃ ಬರ್ನ್ ಆಯಿತು. 8 ವಿಕೆಟ್ ಗೆಲುವು ಸಾಧಿಸಿದ ಮುಂಬೈ ಟೂರ್ನಿಯ 9 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿತು. ಸನ್‌ರೈಸರ್ಸ್ 8ರಲ್ಲಿ 6ನೇ ಸೋಲು ಕಂಡಿತು.
ಸನ್‌ರೈಸರ್ಸ್ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯಿತು. ಹೈನ್ರಿಚ್ ಕ್ಲಾಸೆನ್ ಅಬ್ಬರದ ಹೊರತಾಗಿಯೂ ತಂಡ 8 ವಿಕೆಟ್‌ಗೆ 143 ರನ್ ಗಳಿಸಿತು. ಕೇವಲ 13 ರನ್‌ಗೆ 4, 35 ರನ್‌ಗೆ 5 ವಿಕೆಟ್ ಕಳೆದುಕೊಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಕ್ಲಾಸೆನ್ 44 ಎಸೆತಗಳಲ್ಲಿ 71 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕರ್ನಾಟಕದ ಅಭಿನವ್ ಮನೋಹರ್ 37 ಎಸೆತಕ್ಕೆ 43 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ದೀಪಕ್ ಚಹರ್ 4 ಓವರಲ್ಲಿ 12ಕ್ಕೆ 2, ಎಡಗೈ ವೇಗಿ ಟ್ರೆಂಟ್ ಬೌಲ್ಟ್ 24ಕ್ಕೆ 4 ವಿಕೆಟ್ ಕಿತ್ತರು. ಇನ್ನು ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಕಬಳಿಸಿದರು.
ಮುಂಬೈ ತಂಡ ಗುರಿಯನ್ನು 15.4 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ರೋಹಿತ್ ಶರ್ಮಾ(46 ಎಸೆತಗಳಲ್ಲಿ 70) ಮತ್ತೆ ಸ್ಫೋಟಕ ಆಟವಾಡಿದರು. ವಿಲ್ ಜ್ಯಾಕ್ಸ್ 22, ಸೂರ್ಯಕುಮಾರ್ ಔಟಾಗದೆ 40 ರನ್ ಗಳಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಎಡಗೈ ವೇಗಿ ಜಯದೇವ್ ಉನಾದ್ಕತ್, ಇಶಾನ್ ಮಾಲಿಂಗ ಹಾಗೂ ಝೀಶನ್ ಅನ್ಸಾರಿ ತಲಾ ಒಂದೊಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು
ಸ್ಕೋರ್: ಹೈದರಾಬಾದ್ 20 ಓವರಲ್ಲಿ 143/8 (ಕ್ಲಾಸೆನ್ 71, ಅಭಿನವ್ 43, ಬೌಲ್ಟ್ 4-26, ಚಹರ್ 2-12), ಮುಂಬೈ 00 ಓವರಲ್ಲಿ 000 (ರೋಹಿತ್ 70, ಸೂರ್ಯ 00, ಉನಾದ್ಕಟ್ 1-25)
ರೋಹಿತ್ ಶರ್ಮಾ 12,000 ರನ್
ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 12000 ರನ್ ಪೂರ್ಣಗೊಳಿಸಿದ್ದಾರೆ. ಅವರು ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ಭಾರತದ 2ನೇ, ಒಟ್ಟಾರೆ 8ನೇ ಆಟಗಾರ ಎನಿಸಿಕೊಂಡರು. ಗೇಲ್ 14562, ಹೇಲ್ಸ್ 13610, ಮಲಿಕ್ 13571, ಪೊಲ್ಲಾರ್ಡ್ 13537, ವಿರಾಟ್ ಕೊಹ್ಲಿ 13208, ವಾರ್ನರ್ 13019, ಬಟ್ಲರ್ 12469 ರನ್ ಗಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ 300 ವಿಕೆಟ್
ಟಿ20 ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 300 ವಿಕೆಟ್ ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಭಾರತ 5ನೇ, ವಿಶ್ವದ 33ನೇ ಬೌಲರ್. ಅವರು 238 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಚಹಲ್(373 ವಿಕೆಟ್), ಪಿಯೂಶ್ ಚಾವ್ಲಾ(319), ಭುವನೇಶ್ವರ್(318), ಅಶ್ವಿನ್(315) ಭಾರತದ ಇತರ ಸಾಧಕರು.
01ನೇ ಬಾರಿ: ರೋಹಿತ್ 2016ರ ಬಳಿಕ ಇದೇ ಮೊದಲ ಬಾರಿ ಸತತ 2 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದರು.
ಉಗ್ರ ದಾಳಿ: ಸನ್-ಮುಂಬೈ ಪಂದ್ಯಕ್ಕೆ ಮೈದಾನದಲ್ಲಿರಲಿಲ್ಲ ಚಿಯರ್ ಲೀಡರ್ಸ್, ಪಟಾಕಿ
ಹೈದರಾಬಾದ್: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಘಟನೆಯನ್ನು ಕ್ರಿಕೆಟಿಗರು ಖಂಡಿಸಿದ್ದು, ಮೃತ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿ, ಬುಧವಾರ ಸನ್‌ರೈಸರ್ಸ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಆಟಗಾರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಆಡಿದರು. ಪಂದ್ಯಕ್ಕೂ ಮುನ್ನ ಆಟಗಾರರು ಮೌನಾಚರಣೆ ಮಾಡಿದರು. ಅಲ್ಲದೇ, ಪಂದ್ಯದಲ್ಲಿ ಚಿಯರ್ ಲೀಡರ್‌ಗಳಾಗಲಿ ಪಟಾಕಿಗಳಾಗಲಿ ಇರಲಿಲ್ಲ.
