IPL 2024 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಆರ್‌ಸಿಬಿ vs ಗುಜರಾತ್ ಮೆಗಾ ಫೈಟ್

ಆರ್‌ಸಿಬಿ ಪ್ಲೇ-ಆಫ್‌ ರೇಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದರೂ, ನಾಕೌಟ್‌ಗೇರಲು ಇನ್ನೂ ಅವಕಾಶ ಇದೆ. ಹೀಗಾಗಿ ಗುಜರಾತ್‌ ವಿರುದ್ಧ ದೊಡ್ಡ ಗೆಲುವಿಗಾಗಿ ಆರ್‌ಸಿಬಿ ಕಾತರಿಸುತ್ತಿದೆ. ಕಳೆದ ವಾರ ಅಹಮದಾಬಾದ್‌ನಲ್ಲಿ ಗುಜರಾತನ್ನು ಬಗ್ಗುಬಡಿದಿದ್ದ ಆರ್‌ಸಿಬಿ ತವರಿನಲ್ಲೂ ಬೃಹತ್‌ ಜಯದ ಹುಮ್ಮಸ್ಸಿನಲ್ಲಿದೆ.

IPL 2024 Royal Challengers Bengaluru to on Gujarat Titans in M Chinnaswamy Stadium kvn

ಬೆಂಗಳೂರು(ಮೇ.04): ಸತತ ಸೋಲುಗಳಿಂದ ಸಂಪೂರ್ಣ ಕುಗ್ಗಿ ಹೋಗಿ, ಇನ್ನೇನು ಪ್ಲೇ-ಆಫ್‌ರೇಸ್‌ನಿಂದ ಅಧಿಕೃತವಾಗಿ ಹೊರಬೀಳುತ್ತೆ ಅನ್ನುವಷ್ಟರಲ್ಲಿ ಸತತ 2 ಗೆಲುವಿನೊಂದಿಗೆ ಆತ್ಮವಿಶ್ವಾಸ ಕಂಡುಕೊಂಡಿರುವ ಆರ್‌ಸಿಬಿಗೆ ಶನಿವಾರ ಗುಜರಾತ್‌ ಟೈಟಾನ್ಸ್‌ ಎದುರಾಗಲಿದೆ.

ಆರ್‌ಸಿಬಿ ಪ್ಲೇ-ಆಫ್‌ ರೇಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದರೂ, ನಾಕೌಟ್‌ಗೇರಲು ಇನ್ನೂ ಅವಕಾಶ ಇದೆ. ಹೀಗಾಗಿ ಗುಜರಾತ್‌ ವಿರುದ್ಧ ದೊಡ್ಡ ಗೆಲುವಿಗಾಗಿ ಆರ್‌ಸಿಬಿ ಕಾತರಿಸುತ್ತಿದೆ. ಕಳೆದ ವಾರ ಅಹಮದಾಬಾದ್‌ನಲ್ಲಿ ಗುಜರಾತನ್ನು ಬಗ್ಗುಬಡಿದಿದ್ದ ಆರ್‌ಸಿಬಿ ತವರಿನಲ್ಲೂ ಬೃಹತ್‌ ಜಯದ ಹುಮ್ಮಸ್ಸಿನಲ್ಲಿದೆ.

ಆರ್‌ಸಿಬಿ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6 ಅಂಕ ಸಂಪಾದಿಸಿದೆ. ಪ್ಲೇ-ಆಫ್‌ಗೇರಲು 16 ಅಂಕ ಅಗತ್ಯವಿದ್ದು, ಆರ್‌ಸಿಬಿ ಇನ್ನೆಲ್ಲಾ ಪಂದ್ಯ ಗೆದ್ದರೂ 14 ಅಂಕ ಮಾತ್ರ ಗಳಿಸಬಹುದು. ಆದರೆ ಇತರ ತಂಡಗಳ ಎಲ್ಲಾ ಫಲಿತಾಂಶ ತನ್ನ ಪರವಾಗಿ ಬಂದರೆ ಆರ್‌ಸಿಬಿ ಪ್ಲೇ-ಆಫ್‌ಗೇರಲೂಬಹುದು. ಅತ್ತ ಗುಜರಾತ್‌ 10ರಲ್ಲಿ 4 ಪಂದ್ಯ ಗೆದ್ದಿದ್ದು, ಪ್ಲೇ-ಆಫ್‌ ಆಸೆ ಜೀವಂತವಾಗಿರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು.

5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಪ್ಲೇ-ಆಪ್‌ ಬಾಗಿಲು ಬಂದ್‌!

ಕೊಹ್ಲಿ, ಜ್ಯಾಕ್ಸ್‌ ಬಲ: ಆರ್‌ಸಿಬಿಗೆ ಈ ಬಾರಿ ಮೊದಲಾರ್ಧದಲ್ಲಿ ಕೊಹ್ಲಿ ಮಾತ್ರ ಆಸರೆಯಾಗಿದ್ದರು. ಆದರೆ ಆಲ್ರೌಂಡರ್ ವಿಲ್‌ ಜ್ಯಾಕ್ಸ್‌ ನಿರ್ಣಾಯಕ ಘಟ್ಟದಲ್ಲಿ ಲಯಕ್ಕೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ತನ್ನ ಸ್ಫೋಟಕ ಆಟದ ಮೂಲಕವೇ ಜ್ಯಾಕ್ಸ್‌ ಬಿಸಿ ಮುಟ್ಟಿಸಿದ್ದರು. ರಜತ್‌ ಪಾಟೀದಾರ್‌, ಗ್ರೀನ್‌ ಕೂಡಾ ಮಿಂಚುತ್ತಿದ್ದು, ನಾಯಕ ಫಾಫ್‌ ಡು ಪ್ಲೆಸಿ, ಮ್ಯಾಕ್ಸ್‌ವೆಲ್‌ ಕೂಡಾ ಅಬ್ಬರಿಸಿದರೆ ಎದುರಾಳಿಗಳಿಗೆ ಉಳಿಗಾಲವಿಲ್ಲ.

ಎದುರಾಳಿ ಬ್ಯಾಟರ್‌ಗಳಿಂದ ಮನಬಂದಂತೆ ಚಚ್ಚಿಸಿಕೊಳ್ಳುತ್ತಿದ್ದ ಬೌಲರ್‌ಗಳೂ ಕೊಂಚ ಸುಧಾರಿಸಿದ್ದಾರೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ನೀಡಿದ್ದ ಪ್ರದರ್ಶನ ಮುಂದುವರಿಸುತ್ತಾರೊ ಎಂಬ ಕುತೂಹಲವಿದೆ.

ಸೇಡಿಗೆ ಕಾತರ: ತನ್ನ ತವರಿನಲ್ಲಿ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಶರಣಾಗಿದ್ದ ಗುಜರಾತ್‌, ಈಗ ಆರ್‌ಸಿಬಿಯನ್ನು ಅವರದೇ ತವರಲ್ಲಿ ಮಣಿಸಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ತಂಡ ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿದ್ದು, ಸಂಘಟಿತ ಆಟವಾಡಲು ವಿಫಲವಾಗುತ್ತಿದೆ. ಒಂದಿಬ್ಬರನ್ನು ನೆಚ್ಚಿಕೊಳ್ಳದೇ ತಂಡವಾಗಿ ಆಡಿದರಷ್ಟೇ ತಂಡಕ್ಕೆ ಗೆಲುವು ದಕ್ಕಲಿದೆ. ಸಾಯಿ ಸುದರ್ಶನ್‌, ಶುಭ್‌ಮನ್‌ ಗಿಲ್‌, ಸಾಯಿ ಕಿಶೋರ್‌, ರಶೀದ್‌ ಖಾನ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ, ಇವರೇ ನೋಡಿ ಟಿ20 ವಿಶ್ವಕಪ್‌ನಲ್ಲಿ ಸೆಂಚುರಿ ಬಾರಿಸಿದ ಏಕೈಕ ಟೀಂ ಇಂಡಿಯಾ ಕ್ರಿಕೆಟರ್..!

ಒಟ್ಟು ಮುಖಾಮುಖಿ: 04

ಆರ್‌ಸಿಬಿ: 02

ಟೈಟಾನ್ಸ್‌: 02

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್‌, ರಜತ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ದಿನೇಶ್‌, ಸ್ವಪ್ನಿಲ್‌, ಕರ್ಣ್‌, ಸಿರಾಜ್‌, ದಯಾಳ್‌.

ಟೈಟಾನ್ಸ್‌: ಸಾಹ, ಗಿಲ್‌(ನಾಯಕ), ಸುದರ್ಶನ್‌, ಮಿಲ್ಲರ್‌, ಅಜ್ಮತುಲ್ಲಾ, ತೆವಾಟಿಯಾ, ಶಾರುಖ್‌, ರಶೀದ್, ಕಿಶೋರ್‌, ನೂರ್‌, ಮೋಹಿತ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌: ಚಿನ್ನಸ್ವಾಮಿಯ ಪಿಚ್‌ ಬ್ಯಾಟರ್‌ಗಳ ಸ್ವರ್ಗ ಎಂದೇ ಹೆಸರುವಾಸಿ. ಇಲ್ಲಿ ಕಳೆದ ಆರ್‌ಸಿಬಿ-ಸನ್‌ರೈಸರ್ಸ್‌ ಪಂದ್ಯದಲ್ಲಿ 549 ರನ್‌ ದಾಖಲಾಗಿತ್ತು. ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದ್ದು, ಟಾಸ್‌ ನಿರ್ಣಾಯಕ ಪಾತ್ರ ವಹಿಸಬಹುದು.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ: ಬೆಂಗಳೂರಲ್ಲಿ ಕಳೆದೆರಡು ದಿನಗಳಲ್ಲಿ ಧಾರಾಕಾರ ಮಳೆಯಾಗಿದೆ. ಶನಿವಾರವೂ ಮಳೆ ಸುರಿಯುವ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಿದೆ. ಪ್ಲೇ-ಆಫ್‌ ದೃಷ್ಟಿಯಿಂದ ಇತ್ತಂಡಕ್ಕೂ ಗೆಲುವು ಅನಿವಾರ್ಯವಾಗಿರುವ ಕಾರಣ ಮಳೆಯಿಂದ ಪಂದ್ಯ ರದ್ದಾದರೆ 2 ತಂಡಗಳೂ ಸಂಕಷ್ಟಕ್ಕೊಳಗಾಗಲಿದೆ.

Latest Videos
Follow Us:
Download App:
  • android
  • ios