ಪಂಜಾಬ್ ಹೊರದಬ್ಬಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ RCB
ಪಂಜಾಬ್ ಕಿಂಗ್ಸ್ ಎದುರು 60 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಧರ್ಮಶಾಲಾ(ಮೇ.09): ಕೊಂಚ ಲೇಟ್ ಆದರೂ ಲೇಟೆಸ್ಟ್ ಆಗಿಯೇ ಎಚ್ಚೆತ್ತುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 4ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್ ಕಿಂಗ್ಸ್ ಎದುರು 60 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ ಬಳಿಕ ಇದೀಗ ಪಂಜಾಬ್ ಕಿಂಗ್ಸ್ ಎರಡನೇ ತಂಡವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ತಂಡ ಎನಿಸಿಕೊಂಡಿತು.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರ್‌ಸಿಬಿ ನೀಡಿದ್ದ 242 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಮೊದಲ ಓವರ್‌ನಲ್ಲೇ ಮುಗ್ಗರಿಸಿತು. ಪ್ರಭ್‌ಸಿಮ್ರನ್ ಸಿಂಗ್(6) ಅವರನ್ನು ಸ್ವಪ್ನಿಲ್ ಸಿಂಗ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಪೆವಿಲಿಯನ್ನಿಗಟ್ಟಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ರಿಲೇ ರೂಸ್ಸೌ ಹಾಗೂ ಜಾನಿ ಬೇರ್‌ಸ್ಟೋವ್ 31 ಎಸೆತಗಳಲ್ಲಿ 65 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 16 ಎಸೆತಗಳಲ್ಲಿ 27 ರನ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ ಬೇರ್‌ಸ್ಟೋವ್ ಅವರನ್ನು ಬಲಿ ಪಡೆಯುವಲ್ಲಿ ಲಾಕಿ ಫರ್ಗ್ಯೂಸನ್ ಯಶಸ್ವಿಯಾದರು.
ಪಂಜಾಬ್ ಎದುರು ಪಾಟೀದಾರ್ ಅಬ್ಬರ; ಪಂದ್ಯಕ್ಕೆ ಮಳೆ ಅಡ್ಡಿ, ತಾತ್ಕಾಲಿಕ ಸ್ಥಗಿತ
Match 58. Royal Challengers Bengaluru Won by 60 Run(s) https://t.co/49nk5rssaX #TATAIPL #IPL2024 #PBKSvRCB
— IndianPremierLeague (@IPL) May 9, 2024
ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರೂಸ್ಸೌ ಕೇವಲ 27 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 61 ರನ್ ಸಿಡಿಸಿ ಕರ್ಣ್ ಶರ್ಮಾ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು. ಇನ್ನು ಶಶಾಂಕ್ ಸಿಂಗ್ 37 ರನ್ ಸಿಡಿಸಿ ರನೌಟ್ ಆದರೆ, ನಾಯಕ ಸ್ಯಾಮ್ ಕರ್ರನ್ 22 ರನ್ ಬಾರಿಸಿ ಫರ್ಗ್ಯೂಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 17 ಓವರ್‌ನಲ್ಲಿ 181 ರನ್ ಬಾರಿಸಿ ಸರ್ವಪತನ ಕಂಡಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರೆ, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್ ಹಾಗೂ ಕರ್ಣ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
ಪ್ಲೇ ಆಫ್ ಲೆಕ್ಕಾಚಾರ ತುಂಬಾ ಸುಲಭ: ಆರ್‌ಸಿಬಿ ನಾಕೌಟ್ ಹಾದಿ ಹೀಗಿದೆ ನೋಡಿ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತಾದರೂ, ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು. ಕೊಹ್ಲಿ ಕೇವಲ 47 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 92 ರನ್ ಬಾರಿಸಿ ಆರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ರಜತ್ ಪಾಟೀದಾರ್ 23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 55 ರನ್ ಬಾರಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರು.