Asianet Suvarna News Asianet Suvarna News

ಕೆಕೆಆರ್ ಎದುರು 1 ರನ್ ರೋಚಕ ಸೋಲು ಕಂಡ ಆರ್‌ಸಿಬಿ..! ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಕೇವಲ 35 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ವಿಲ್ ಜ್ಯಾಕ್ಸ್ ಹಾಗೂ ರಜತ್ ಪಾಟೀದಾರ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕೆಕೆಆರ್ ಬೌಲರ್‌ಗಳ ಮೇಲೆ ಈ ಜೋಡಿ ಸವಾರಿ ಮಾಡಿತು. ಅದರಲ್ಲೂ ಐಪಿಎಲ್‌ನ ದುಬಾರಿ ಬೌಲರ್ ಎನಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್‌ ಒಂದೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 22 ರನ್ ಸಿಡಿಸಿದರು.

IPL 2024 Kolkata Knight Riders 1 run thrilling victory over RCB kvn
Author
First Published Apr 21, 2024, 7:47 PM IST

ಕೋಲ್ಕತಾ(ಏ.21): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಗೂ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ಒಂದು ರನ್ ರೋಚಕ ಜಯ ಸಾಧಿಸಿದೆ. ಗೆಲ್ಲಲು ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ 21 ರನ್ ಅಗತ್ಯವಿತ್ತು. ಕರ್ಣ್ ಶರ್ಮಾ 3 ಸಿಕ್ಸರ್ ಸಿಡಿಸಿದರಾದರೂ, ತಂಡವನ್ನು ರೋಚಕ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ 7ನೇ ಸೋಲು ಕಂಡ ಆರ್‌ಸಿಬಿ ತಂಡವು ಬಹುತೇಕ ಪ್ಲೇ ಆಫ್‌ ಕನಸು ಭಗ್ನವಾದಂತೆ ಆಗಿದೆ.

ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಗೆಲ್ಲಲು 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವಿರಾಟ್ ಕೊಹ್ಲಿ ಕೇವಲ 7 ಎಸೆತಗಳಲ್ಲಿ 18 ರನ್ ಗಳಿಸಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇನ್ನು ಇದರ ಬೆನ್ನಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ 7 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. 

ಜ್ಯಾಕ್ಸ್-ಪಾಟೀದಾರ್ ಜುಗಲ್ಬಂದಿ: ಕೇವಲ 35 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ವಿಲ್ ಜ್ಯಾಕ್ಸ್ ಹಾಗೂ ರಜತ್ ಪಾಟೀದಾರ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕೆಕೆಆರ್ ಬೌಲರ್‌ಗಳ ಮೇಲೆ ಈ ಜೋಡಿ ಸವಾರಿ ಮಾಡಿತು. ಅದರಲ್ಲೂ ಐಪಿಎಲ್‌ನ ದುಬಾರಿ ಬೌಲರ್ ಎನಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್‌ ಒಂದೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 22 ರನ್ ಸಿಡಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ವಿಲ್ ಜ್ಯಾಕ್ಸ್ ಕೇವಲ 29 ಎಸೆತಗಳನ್ನು ಎದುರಿಸಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ ಕೇವಲ 48 ಎಸೆತಗಳಲ್ಲಿ 102 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 

ಈಡನ್‌ ಗಾರ್ಡನ್‌ನಲ್ಲೂ ರನ್ ಮಳೆ: ಆರ್‌ಸಿಬಿಗೆ ಗೆಲ್ಲಲು 223 ರನ್ ಗುರಿ ನೀಡಿದ ಕೆಕೆಆರ್

ಇನ್ನು ಮತ್ತೊಂದು ತುದಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಾಟೀದಾರ್, ಇಂಪ್ಯಾಕ್ಟ್ ಆಟಗಾರ ಸುಯಾಸ್ ಶರ್ಮಾ ಬೌಲಿಂಗ್‌ನಲ್ಲಿ ತಲಾ 2 ಸಿಕ್ಸ್ ಹಾಗೂ ಬೌಂಡರಿ ಸಹಿತ 22 ರನ್ ಚಚ್ಚಿದರು. 

ಶಾಕ್ ಕೊಟ್ಟ ರಸೆಲ್-ನರೈನ್: ಶತಕದ ಜತೆಯಾಟವಾಡಿ ಮುನ್ನುಗ್ಗುತ್ತಿದ್ದ ಆರ್‌ಸಿಬಿ ಜೋಡಿಯನ್ನು ಬೇರ್ಪಡಿಸುವಲ್ಲಿ ಆಂಡ್ರೆ ರಸೆಲ್ ಯಶಸ್ವಿಯಾದರು. ರಸೆಲ್ ಎಸೆದ 12ನೇ ಓವರ್‌ನ ಮೊದಲ ಎಸೆತದಲ್ಲೇ ವಿಲ್ ಜ್ಯಾಕ್ಸ್ ಬಲಿ ಪಡೆದರು. ಜ್ಯಾಕ್ಸ್ ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 55 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದೇ ಓವರ್‌ನ 4ನೇ ಎಸೆತದಲ್ಲಿ ರಜತ್ ಪಾಟೀದಾರ್ ಅವರನ್ನು ಬಲಿ ಪಡೆದರು. ಪಾಟೀದಾರ್23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು.

ಇನ್ನು 13ನೇ ಓವರ್‌ನಲ್ಲಿ ಸುನಿಲ್ ನರೈನ್, ಆರ್‌ಸಿಬಿ ಬ್ಯಾಟರ್ ಕ್ಯಾಮರೋನ್ ಗ್ರೀನ್(6) ಹಾಗೂ ಮಹಿಪಾಲ್(4) ಅವರನ್ನು ಬಲಿ ಪಡೆಯುವ ಮೂಲಕ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ನೀಡಿದರು.

ಅನಾಯಾಸವಾಗಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಆರ್‌ಸಿಬಿ ಕೇವಲ 2 ಎರಡು ಓವರ್‌ ಅಂತರದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದಾದ ಬಳಿಕ ಇಂಪ್ಯಾಕ್ಟ್ ಆಟಗಾರ ಸುಯಾಶ್ ಪ್ರಭುದೇಸಾಯಿ ಜತೆಗೂಡಿ ದಿನೇಶ್ ಕಾರ್ತಿಕ್ 7ನೇ ವಿಕೆಟ್‌ಗೆ 32 ರನ್ ಜತೆಯಾಟವಾಡಿದರು. ಪ್ರಭುದೇಸಾಯಿ 24 ರನ್ ಗಳಿಸಿ ರಾಣಾಗೆ ಎರಡನೇ ಬಲಿಯಾದರು.

ರೋಹಿತ್ ಶರ್ಮಾ ಬಳಿಕ ಭಾರತದ ಭವಿಷ್ಯದ ನಾಯಕ ಯಾರು..? ಸುರೇಶ್ ರೈನಾ ಕೊಟ್ರು ಇಂಟ್ರೆಸ್ಟಿಂಗ್ ಆನ್ಸರ್

ಇನ್ನು ಕೊನೆಯಲ್ಲಿ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 25 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಾಯಕ ಶ್ರೇಯಸ್ ಅಯ್ಯರ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಕಳೆದುಕೊಂಡು 222 ರನ್ ಬಾರಿಸಿತ್ತು.
 

Follow Us:
Download App:
  • android
  • ios