ಈಡನ್‌ ಗಾರ್ಡನ್‌ನಲ್ಲೂ ರನ್ ಮಳೆ: ಆರ್‌ಸಿಬಿಗೆ ಗೆಲ್ಲಲು 223 ರನ್ ಗುರಿ ನೀಡಿದ ಕೆಕೆಆರ್

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಫಿಲ್ ಸಾಲ್ಟ್ ಕೇವಲ 4.2 ಓವರ್‌ನಲ್ಲಿ 56 ರನ್‌ಗಳ ಜತೆಯಾಟವಾಡಿದರು.

IPL 2024 Kolkata Knight Riders Set 223 runs target to RCB in Eden Gardens kvn

ಕೋಲ್ಕತಾ(ಏ.21): ನಾಯಕ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿದ್ದು, ಆರ್‌ಸಿಬಿ ಮತ್ತೊಮ್ಮೆ ಕಠಿಣ ಗುರಿ ನೀಡಿದೆ. ಸತತ ಆರನೇ ಸೋಲಿನಿಂದ ಪಾರಾಗಬೇಕಿದ್ದರೇ, ಫಾಫ್ ಪಡೆ ಕಠಿಣ ಸವಾಲು ಮೆಟ್ಟಿನಿಲ್ಲಬೇಕಿದೆ. ಆರ್‌ಸಿಬಿ ತಂಡವು ಒಮ್ಮೆ ಮಾತ್ರ 200+ ರನ್ ಯಶಸ್ವಿಯಾಗಿ ಬೆನ್ನತ್ತಿದೆ.

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಫಿಲ್ ಸಾಲ್ಟ್ ಕೇವಲ 4.2 ಓವರ್‌ನಲ್ಲಿ 56 ರನ್‌ಗಳ ಜತೆಯಾಟವಾಡಿದರು. ಅದರಲ್ಲೂ ಲಾಕಿ ಫರ್ಗ್ಯೂಸನ್ ಎಸೆದ ಮೊದಲ ಓವರ್‌ನಲ್ಲಿ ಫಿಲ್ ಸಾಲ್ಟ್ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 28 ರನ್ ಚಚ್ಚಿದರು. ಅಂತಿಮವಾಗಿ ಮೊಹಮ್ಮದ್ ಸಿರಾಜ್, ಫಿಲ್ ಸಾಲ್ಟ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಫಿಲ್ ಸಾಲ್ಟ್ ಕೇವಲ 14 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಸುನಿಲ್ ನರೈನ್ ಕೇವಲ 10 ರನ್ ಬಾರಿಸಿ ಯಶ್ ದಯಾಳ್‌ಗೆ ವಿಕೆಟ್‌ ಒಪ್ಪಿಸಿದರು. ಅದೇ ಓವರ್‌ನಲ್ಲೇ ಯಶ್ ದಯಾಳ್, ಅಂಗ್‌ಕೃಷ್‌ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಪವರ್‌ಪ್ಲೇ ಅಂತ್ಯದ ವೇಳೆಗೆ ಕೆಕೆಆರ್ ತಂಡವು 3 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತು. 

ರೋಹಿತ್ ಶರ್ಮಾ ಬಳಿಕ ಭಾರತದ ಭವಿಷ್ಯದ ನಾಯಕ ಯಾರು..? ಸುರೇಶ್ ರೈನಾ ಕೊಟ್ರು ಇಂಟ್ರೆಸ್ಟಿಂಗ್ ಆನ್ಸರ್

ಇದಾದ ಬಳಿಕ ಕ್ರೀಸ್‌ಗಿಳಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ 4ನೇ ವಿಕೆಟ್‌ಗೆ 22 ರನ್‌ಗಳ ಜತೆಯಾಟವಾಡಿದರು. ವೆಂಕಟೇಶ್ ಅಯ್ಯರ್ 8 ಎಸೆತಗಳನ್ನು ಎದುರಿಸಿ 16 ರನ್ ಗಳಿಸಿ ಕ್ಯಾಮರೋನ್‌ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವೆಂಕಿ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರಿಂಕು ಸಿಂಗ್ ನಾಯಕ ಶ್ರೇಯಸ್ ಅಯ್ಯರ್ ಜತೆ 5ನೇ ವಿಕೆಟ್‌ಗೆ 40 ರನ್‌ಗಳ ಅಮೂಲ್ಯ ಜತೆಯಾಟವಾಡಿದರು. ರಿಂಕು 24 ರನ್ ಬಾರಿಸಿ ಲಾಕಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿದರು.

ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್: 

ಇನ್ನು ಕಳೆದ ಕೆಲ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ನಾಯಕ ಶ್ರೇಯಸ್ ಅಯ್ಯರ್ ಕೊನೆಗೂ ಆರ್‌ಸಿಬಿ ಎದುರು ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದರು. ಒಂದು ಕಡೆ ಆಗಾಗ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 35 ರನ್ ಗಳಿಸಿ ಈ ಆವೃತ್ತಿಯ ಮೊದಲ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಅಯ್ಯರ್ 36 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್ ಗಳಿಸಿ ಕ್ಯಾಮರೋನ್ ಗ್ರೀನ್‌ಗೆ ಎರಡನೇ ಬಲಿಯಾದರು.

ಇನ್ನು ಕೊನೆಯಲ್ಲಿ ಆಂಡ್ರೆ ರಸೆಲ್ ಅಜೇಯ 27 ರನ್ ಬಾರಿಸಿದರೆ, ರಮಣ್‌ದೀಪ್ ಸಿಂಗ್ ಅಜೇಯ 24 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.
 

Latest Videos
Follow Us:
Download App:
  • android
  • ios