ಗೆಲ್ಲಲು 258 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ 8 ರನ್ ಬಾರಿಸಿ ಖಲೀಲ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ 20 ರನ್ ಬಾರಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

ನವದೆಹಲಿ(ಏ.27): ಜೇಕ್ ಫ್ರೇಸರ್ ಮೆಗಾರ್ಥ್ ಸ್ಪೋಟಕ ಅರ್ಧಶತಕ, ರಸಿಕ್ ಸಲಾಮ್ ಶಿಸ್ತುಬದ್ದ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು 10 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ

ಗೆಲ್ಲಲು 258 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ 8 ರನ್ ಬಾರಿಸಿ ಖಲೀಲ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ 20 ರನ್ ಬಾರಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇಂಪ್ಯಾಕ್ಟ್ ಆಟಗಾರ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಬಾರಿಸಿ ಖಲೀಲ್ ಅಹಮದ್‌ಗೆ ಎರಡನೇ ಬಲಿಯಾದರು.

ಗುಡುಗಿದ ಪಾಂಡ್ಯ-ತಿಲಕ್ ವರ್ಮಾ: ಪವರ್‌ಪ್ಲೇ ಅಂತ್ಯದ ವೇಳೆಗೆ 65 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಮುಂಬೈ ತಂಡಕ್ಕೆ 4ನೇ ವಿಕೆಟ್‌ಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಆಸರೆಯಾದರು. ಈ ಜೋಡಿ 39 ಎಸೆತಗಳನ್ನು ಎದುರಿಸಿ 71 ರನ್‌ಗಳ ಜತೆಯಾಟವಾಡಿತು. ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿ ರಸಿಕ್ ಸಲಾಮ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕಳೆದ ಪಂದ್ಯದ ಹೀರೋ ನೆಹಾಲ್ ವದೇರಾ ಕೇವಲ 4 ರನ್ ಗಳಿಸಿ ರಸಿಕ್‌ಗೆ ಎರಡನೇ ಬಲಿಯಾದರು.

ಇನ್ನು ದಿಢೀರ್ ಎನ್ನುವಂತೆ ಎರಡು ವಿಕೆಟ್ ಕಳೆದುಕೊಂಡ ಬಳಿಕ ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಮತ್ತಷ್ಟು ಆಕ್ರಮಣಕಾರಿ ಆಟವಾಡಿದರು. ಆರನೇ ವಿಕೆಟ್‌ಗೆ ಈ ಜೋಡಿ 29 ಎಸೆತಗಳನ್ನು ಎದುರಿಸಿ 70 ರನ್ ಜತೆಯಾಟವಾಡಿತು. ಟಿಮ್ ಡೇವಿಡ್ 17 ಎಸೆತಗಳಲ್ಲಿ 37 ರನ್ ಸಿಡಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯವರೆಗೂ ಹೋರಾಟ ನಡೆಸಿದ ತಿಲಕ್ ವರ್ಮಾ 32 ಎಸೆತಗಳನ್ನು ಎದುರಿಸಿ 63 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಇಂಪ್ಯಾಕ್ಟ್ ಆಟಗಾರ ರಸಿಕ್ ಸಲಾಮ್ ಹಾಗೂ ಮುಕೇಶ್ ಕುಮಾರ್ ತಲಾ 3 ವಿಕೆಟ್ ಪಡೆದರೆ, ಖಲೀಲ್ ಅಹಮದ್ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಜೇಕ್ ಫ್ರೇಸರ್, ಶಾಯ್ ಹೋಪ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಬಾರಿಸಿತು. ಫ್ರೇಸರ್ 27 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ಶಾಯ್ ಹೋಪ್ 41 ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಅಜೇಯ 48 ರನ್ ಸಿಡಿಸಿದರು.