* 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್* ಸ್ನಾಯು ಸೆಳೆತದಿಂದ ಬಳಲುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್ ಆಲ್ರೌಂಡರ್* ಸೋಲಿನಿಂದ ಕಂಗೆಟ್ಟಿರುವ ಹೈದರಾಬಾದ್‌ಗೆ ಮತ್ತೊಂದು ಆಘಾತ

ನವದೆಹಲಿ(ಏ.28): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಲು ಪರದಾಡುತ್ತಿರುವ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್, ಸ್ನಾಯು ಸೆಳೆತದಿಂದಾಗಿ 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ತಮಿಳುನಾಡು ಮೂಲದ ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಂದಗತಿಯ ಆರಂಭವನ್ನು ಪಡೆದಿದ್ದರು. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಾಷಿಂಗ್ಟನ್ ಸುಂದರ್, ಪರಿಣಾಮಕಾರಿ ಆಟ ಆಡುವಲ್ಲಿ ವಿಫಲರಾಗಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ 23 ವರ್ಷದ ಸುಂದರ್‌, ಆರೆಂಜ್ ಆರ್ಮಿ ಪರ ಅದ್ಭುತ ಆಟದ ಮೂಲಕ ಮಿಂಚಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್, ಒಂದೇ ಓವರ್‌ನಲ್ಲಿ ನಾಯಕ ಡೇವಿಡ್ ವಾರ್ನರ್, ಸರ್ಫರಾಜ್ ಖಾನ್ ಹಾಗೂ ಅಮನ್‌ ಖಾನ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಸುಂದರ್ 4 ಓವರ್ ಬೌಲಿಂಗ್ ಮಾಡಿ ಕೇವಲ 28 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಡೆಲ್ಲಿ ಎದುರು ಹೈದರಾಬಾದ್‌ ಪಾಳಯದಲ್ಲಿ ಸುಂದರ್ ಗೆಲುವಿನ ಆಸೆ ಮೂಡಿಸಿದ್ದರು. ವಾಷಿಂಗ್ಟನ್ ಸುಂದರ್, ಕೇವಲ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 24 ರನ್‌ ಬಾರಿಸಿ ಮಿಂಚಿದ್ದರು. 

IPL 2023 ಇಂದು ಲಖನೌ vs ಪಂಜಾಬ್‌ ಹೈವೋಲ್ಟೇಜ್ ಕದನ

ಆದರೆ ಇದೀಗ, 16ನೇ ಆವೃತ್ತಿಯಲ್ಲಿ ವಾಷಿಂಗ್ಟನ್ ಸುಂದರ್ ಅವರ ಆಟ ಅಂತ್ಯವಾಗಿರುವುದನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ.

Scroll to load tweet…

ಸ್ನಾಯು ಸೆಳೆತದ ಗಾಯದ ಸಮಸ್ಯೆಯಿಂದಾಗಿ ವಾಷಿಂಗ್ಟನ್ ಸುಂದರ್, 2023ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಿ ವಾಷಿ ಎಂದು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಟ್ವೀಟ್ ಮಾಡಿದೆ.

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದುವರೆಗೂ 7 ಪಂದ್ಯಗಳನ್ನಾಡಿ 2 ಗೆಲುವು ಹಾಗೂ 5 ಸೋಲು ಕಂಡಿದೆ. ಪ್ಲೇ ಆಫ್‌ ರೇಸ್‌ನಲ್ಲಿಉಳಿಯಬೇಕಿದ್ದರೇ ಆರೆಂಜ್‌ ಆರ್ಮಿಯು ಇನ್ನುಳಿದ 7 ಪಂದ್ಯಗಳ ಪೈಕಿ ಕನಿಷ್ಠ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಏಪ್ರಿಲ್ 29ರಂದು ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.