ಚಿಪಾಕ್ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿದಿತ್ತು. ಮೊದಲು ಚೆನ್ನೈ ತಂಡ ಅಬ್ಬರಿಸಿದರೆ,ಬಳಿಕ ಪಂಜಾಬ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಂತಿಮ ಓವರ್‌ನಲ್ಲಿ ಪಂಜಾಬ್ ಮ್ಯಾಜಿಕ್, ಚೆನ್ನೈ ತಂಡಕ್ಕೆ ಶಾಕ್ ನೀಡಿತು. ಕೊನೆಯ ಎಸೆತದಲ್ಲಿ ಪಂಜಾಬ್ 4 ವಿಕೆಟ್ ರೋಚಕ ಗೆಲುವು ದಾಖಲಿಸಿದೆ. 

ಚೆನ್ನೈ(ಏ.30): ಪ್ರತಿ ಎಸೆತ ಕುತೂಹಲ, ಒಂದೊಂದೆ ವಿಕೆಟ್ ಬೀಳುತ್ತಿದ್ದಂತೆ ಸಿಎಸ್‌ಕೆ ಅಭಿಮಾನಿಗಳ ಸಂಭ್ರಮವಾದರೆ, ಬೌಂಡರಿ ಸಿಕ್ಸರ್ ಸಿಡಿಯುತ್ತದ್ದಂತೆ ಪಂಜಾಬ್ ಅಭಿಮಾನಿಗಳ ಸಡಗರ. ಒಮ್ಮೆ ಸಿಎಸ್‌ಕೆ, ಮತ್ತೊಮ್ಮೆ ಪಂಜಾಬ್. ಹೀಗೆ ಕ್ಷಣ ಕ್ಷಣಕ್ಕೂ ಪಂದ್ಯ ಒಂದೊಂದು ಕಡೆ ವಾಲುತ್ತಿತ್ತು. ಅಂತಿಮ ಓವರ್‌ನಲ್ಲಿ ಪಂಜಾಬ್ ಗೆಲುವಿಗೆ 9 ರನ್ ಬೇಕಿತ್ತು. ಸಿಕಂದರ್ ರಾಜಾ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಪಂಜಾಬ್ ಅಂತಿಮ ಎಸೆತದಲ್ಲಿ 4 ವಿಕೆಟ್ ಗೆಲುವು ದಾಖಲಿಸಿ ಸಂಭ್ರಮಿಸಿತು. ಇತ್ತ 200 ರನ್ ಸಿಡಿಸಿದ ಸಿಎಸ್‌ಕೆ ಸೋಲಿಗೆ ಶರಣಾಯಿತು.

ಬೃಹತ್ ಮೊತ್ತ ಟಾರ್ಗೆಟ್ ಪಂಜಾಬ್ ತಂಡದ ಮೇಲೆ ಒತ್ತಡ ತರಲಿಲ್ಲ. ನಾಯಕ ಶಿಖರ್ ಧವನ್ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಆರಂಭ ಪಂಜಾಬ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 50 ರನ್ ಜೊತೆಯಾಟ ನೀಡಿತು. ಶಿಖರ್ ಧನ್ 15 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 28 ರನ್ ಸಿಡಿಸಿ ಔಟಾದರು. ಇತ್ತ ಪ್ರಬ್‌ಸಿಮ್ರನ್ ಸಿಂಗ್ 24 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 48 ರನ್ ಕಾಣಿಕೆ ನೀಡಿದರು.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಅಥರ್ವ ಟೈಡೆ 13 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ಸ್ಯಾಮ್ ಕುರನ್ ಜೊತೆಯಾಟದಿಂದ ಪಂಜಾಬ್ ಮತ್ತೆ ಪುಟಿದೆದ್ದಿತು. ಲಿಯಾಮ್ 24 ಎಸೆತದಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 40 ರನ್ ಸಿಡಿಸಿದರು. ಇತ್ತ ಸ್ಯಾಮ್ ಕುರನ್ 20 ಎಸೆತದಲ್ಲಿ 29 ರನ್ ಕಾಣಿಕೆ ನೀಡಿದರು. ಜಿತೇಶ್ ಶರ್ಮಾ 21 ರನ್ ಸಿಡಿಸಿ ನಿರ್ಗಮಿಸಿದರು. 

ಸಿಕಂದರ್ ರಾಜಾ ಹಾಗೂ ಶಾರುಖ್ ಖಾನ್ ಮೇಲೆ ಒತ್ತಡ ಹೆಚ್ಚಾಯಿತು. ಪಂಜಾಬ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ ಪಂಜಾಬ್ ಗೆಲುವಿಗೆ 9 ರನ್ ಅವಶ್ಯಕತೆ ಇತ್ತು. ಮತೀಶ ಪಥಿರಾನಾ ಮೊದಲ ಎಸೆತದಲ್ಲಿ ಸಿಕಂದರ್ ರಾಜಾ 1 ರನ್ ಸಿಡಿಸಿದರು. ಶಾರುಖ್ ಬಿರುಸಿನ ಹೊಡೆತ ಪ್ರಯೋಜವಾಗಲಿಲ್ಲ. ಆದರೆ ಲೆಗ್ ಬೈಸ್ ಮೂಲಕ ಪಂಜಾಬ್ 1 ರನ್ ಗಳಿಸಿತು. ಮೂರನೇ ಎಸೆತದಲ್ಲಿ ಸಿಕಂದರ್ ರಾಜಾ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಪಂಜಾಬ್ ಆತಂಕ ಹೆಚ್ಚಾಯಿತು. ಪಂಜಾಬ್ ಗೆಲುವಿಗೆ ಅಂತಿಮ 3 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. 4 ಮತ್ತು 5 ನೇ ಎಸೆತದಲ್ಲಿ ಸಿಕಂದರ್ ರಾಜಾ ತಲಾ ಎರಡೆರಡು ರನ್ ಸಿಡಿಸಿದರು. ಇದರಿಂದ ಪಂಜಾಬ್‌ ಗೆಲುವಿಗೆ ಅಂತಿಮ 1 ಎಸೆತದಲ್ಲಿ 3 ರನ್ ಬೇಕಿತ್ತು. ಸ್ಲೋ ಬಾಲ್ ಎಸೆದ ಪತಿರಾನಾ ನಿಯಂತ್ರಿಸುವ ವಿಶ್ವಾಸದಲ್ಲಿದ್ದರು. ಆದರೆ ಸಿಕಂದರ್ ರಾಜಾ ಸರಿಯಾಗಿ 3 ರನ್ ಸಿಡಿಸಿ ಪಂಜಾಬ್ ತಂಡಕ್ಕೆ ರೋಚಕ 4 ವಿಕೆಟ್ ಗೆಲುವು ದಾಖಲಿಸಿತು.