ಚಿನ್ನಸ್ವಾಮಿಯಲ್ಲಿ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಆರ್ಸಿಬಿಡೆಲ್ಲಿ ವಿರುದ್ಧದ ಗೆಲುವಿನಿಂದ ವೃದ್ಧಿಸಿದ ಆರ್‌ಸಿಬಿ ಆತ್ಮವಿಶ್ವಾಸಚೆನ್ನೈಗೆ ಮತ್ತೆ ಗಾಯಾಳುಗಳ ಸಮಸ್ಯೆ: ಸ್ಟೋಕ್ಸ್ ಅನುಮಾನಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ
ಬೆಂಗಳೂರು(ಏ.17): ಐಪಿಎಲ್ ಇತಿಹಾಸದಲ್ಲೇ ಸಾಂಪ್ರದಾಯಿಕ ಬದ್ಧ ಎದುರಾಳಿಗಳು ಎನಿಸಿಕೊಂಡಿರುವ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್‌್ಸ ನಡುವಿನ ಮೆಗಾ ಫೈಟ್‌ಗೆ ವೇದಿಕೆ ಸಿದ್ಧವಾಗಿದ್ದು, ಬಹುನಿರೀಕ್ಷಿತ ಸೆಣಸಾಟಕ್ಕೆ ಸೋಮವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. 2 ದಿನದ ಹಿಂದಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಬಗ್ಗುಬಡಿದಿದ್ದ ಆರ್‌ಸಿಬಿ ತವರಿನ ಅಂಗಳದಲ್ಲಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದ್ದರೆ, ಗಾಯಾಳುಗಳ ಸಮಸ್ಯೆಯ ಹೊರತಾಗಿಯೂ ಗೆಲುವಿನ ದಾರಿ ಹುಡುಕಲು ಚೆನ್ನೈ ಎದುರು ನೋಡುತ್ತಿದೆ.
ಚೆನ್ನೈ ತನ್ನ ಮುಂದಿನ 6 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ತವರಿನಾಚೆ ಆಡಲಿದ್ದು, ಕೋಚ್ ಸ್ಟೀಫನ್ ಫ್ಲೆಮಿಂಗ್ ವೇಗದ ಬೌಲರ್‌ಗಳನ್ನು ಹೊಂದಿಸಲು ಸಾಹಸ ಮಾಡಬೇಕಿದೆ. ಜೊತೆಗೆ ನಾಯಕ ಎಂ.ಎಸ್.ಧೋನಿಯೂ ಮಂಡಿ ನೋವಿನಿಂದ ಬಳಲುತ್ತಿರುವ ಕಾರಣ ಚೆನ್ನೈ ಟೂರ್ನಿಯ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಮತ್ತೊಂದೆಡೆ ಆರ್‌ಸಿಬಿ ಕೂಡ ಗಾಯಾಳುಗಳ ಸಮಸ್ಯೆಗೆ ಒಳಗಾದರೂ, ತಂಡ ಸಂಯೋಜನೆಗೆ ತೊಡಕಾಗದಂತೆ ಎಚ್ಚರಿಕೆ ವಹಿಸಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಸಿರಾಜ್ ಪ್ರಚಂಡ ಲಯದಲ್ಲಿದ್ದು, ಸ್ಥಳೀಯ ಆಟಗಾರ ವೈಶಾಖ್ ವಿಜಯ್‌ಕುಮಾರ್ ಆಡಿದ ಮೊದಲ ಪಂದ್ಯದಲ್ಲೇ ಭರವಸೆ ಮೂಡಿಸಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಚಚ್ಚಿಸಿಕೊಂಡಿದ್ದ ಹರ್ಷಲ್ ಪಟೇಲ್ ಲಯ ಕಂಡುಕೊಂಡಂತೆ ಕಾಣುತ್ತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಈ ವರೆಗೂ ಕೇವಲ ಒಂದು ಓವರ್ ಬೌಲ್ ಮಾಡಿದ್ದರೂ, ಚೆನ್ನೈನ ಬ್ಯಾಟಿಂಗ್ ಪಡೆ ಹೆಚ್ಚು ಎಡಗೈ ಆಟಗಾರರಿಂದ ಕೂಡಿರುವ ಕಾರಣ ಈ ಪಂದ್ಯದಲ್ಲಿ ಹೆಚ್ಚು ಬೌಲಿಂಗ್ ಅವಕಾಶ ಸಿಗಬಹುದು.
IPL 2023 ಸಂಜು, ಶಿಮ್ರೊನ್ ಸಿಕ್ಸರ್‌ಗೆ ಬೆಚ್ಚಿದ ಗುಜರಾತ್, ರಾಜಸ್ಥಾನ ರಾಯಲ್ಸ್‌ಗೆ 3 ವಿಕೆಟ್ ಗೆಲುವು!
ಬ್ಯಾಟಿಂಗ್ ವಿಭಾಗದಲ್ಲಿ ಆರ್‌ಸಿಬಿಯ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಅದ್ಭುತ ಲಯದಲ್ಲಿದ್ದಾರೆ. ಮ್ಯಾಕ್ಸ್‌ವೆಲ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಈ ಮೂವರನ್ನು ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಇದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದಂತೆ ಕಾಣುತ್ತಿದೆ.
ಇನ್ನು ದೀಪಕ್ ಚಹರ್, ಸಿಸಾಂಡ ಮಗಾಲ, ಸಿಮರ್‌ಜೀತ್ ಸಿಂಗ್ ಹಾಗೂ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದು, ಮತೀಶ ಪತಿರಣ ಈಗಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಆದರೂ ಕಳೆದ ಬುಧವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಪತಿರಣ ಅವರನ್ನು ಕಣಕ್ಕಿಳಿಸಿದ್ದ ಚೆನ್ನೈ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅವರನ್ನು ಆಡಿಸಬಹುದು. ಇನ್ನು ಮ್ಯಾಕ್ಸ್‌ವೆಲ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಜಡೇಜಾ, ಸ್ಪಿನ್ನರ್ ಮಹೀಶ್ ತೀಕ್ಷಣ ಮೇಲೂ ಸಿಎಸ್‌ಕೆ ಹೆಚ್ಚಿನ ನಿರೀಕ್ಷೆ ಇರಿಸಲಿದೆ.
ಒಟ್ಟು ಮುಖಾಮುಖಿ: 30
ಆರ್‌ಸಿಬಿ: 10
ಚೆನ್ನೈ: 19
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್.
ಚೆನ್ನೈ: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ),ಪತಿರಣ, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ಪಿಚ್ ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ವೇಗಿಗಳಿಗೂ ನೆರವು ನೀಡಲಿದೆ. ಚೇಸಿಂಗ್ ಸುಲಭವಾಗುವ ಕಾರಣ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವುದು ಬಹುತೇಕ ಖಚಿತ.
ಟಿಕೆಟ್ ಇಲ್ಲದಿದ್ದರೂ ಅಭಿಮಾನಿಗಳ ಕ್ಯೂ!
ಆರ್‌ಸಿಬಿ-ಚೆನ್ನೈ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್‌ಔಟ್ ಆಗಿದ್ದರೂ ಭಾನುವಾರವೂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಟಿಕೆಟ್‌ಗಾಗಿ ನೂರಾರು ಮಂದಿ ಅಭಿಮಾನಿಗಳು ಸೇರಿದ್ದರು. ಅಧಿಕಾರಿಗಳು ಟಿಕೆಟ್ ಈಗಾಗಲೇ ಮುಗಿದಿದೆ ಎಂದು ಹೇಳಿದರೂ ಸ್ಥಳದಿಂದ ತೆರಳಲಿಲ್ಲ. ಗೇಟ್ ಬಳಿ ನೆರೆದಿದ್ದ ಪ್ರೇಕ್ಷಕರನ್ನು ಅಲ್ಲಿಂದ ಹೊರಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
