ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಹೋರಾಟಕ್ಕೆ ಸಿಎಸ್‌ಕೆ ತಲೆಬಾಗಿದೆ. ಪ್ಲೇ ಆಫ್ ಹಾದಿ ಸುಗಮಗೊಳಿಸುವ ಲೆಕ್ಕಾಚಾರದಲ್ಲಿದ್ದ ಸಿಎಸ್‌ಕೆ ಕೆಕೆಆರ್ ಶಾಕ್ ನೀಡಿದೆ. ಇದೀಗ ಕೆಕೆಆರ್ ಕೂಡ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಚೆನ್ನೈ(ಮೇ.14): ರಿಂಕು ಸಿಂಗ್ ಹಾಗೂ ನಾಯಕ ನಿತೀಶ್ ರಾಣಾ ಹೋರಾಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬಳಿ ಉತ್ತರ ಇರಲಿಲ್ಲ. ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 144 ರನ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಕೆಕೆಆರ್ ತಂಡಕ್ಕೆ ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಹೋರಾಟದಿಂದ ಗೆಲುವಿನ ನಗೆ ಬೀರಿದೆ. ಕೆಕೆಆರ್ 6 ವಿಕೆಟ್ ಗೆಲುವು ದಾಖಲಿಸಿ ಇದೀಗ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಕೋಲ್ಕತಾ ನೈಟ್ ರೈಡರ್ಸ್‌ ಸುಲಭ ಟಾರ್ಗೆಟ್ ಪಡೆದಿತ್ತು. 145 ರನ್ ಚೇಸ್ ಮಾಡಲು ಕಣಕ್ಕಿಳಿದ ಕೆಕೆಆರ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ರಹಮಾನುಲ್ಲಾ ಗುರ್ಬಾಜ್ 1 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ವೆಂಕಟೇಶ್ ಅಯ್ಯರ್ 9 ರನ್ ಸಿಡಿಸಿ ಔಟಾದರು. ಕೆಕೆಆರ್ 21 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಕೆಕೆಆರ್ ಚೇತರಿಸಿಕೊಳ್ಳುವ ಮೊದಲೇ ಜೇಸನ್ ರಾಯ್ 12 ರನ್ ಸಿಡಿಸಿ ನಿರ್ಗಮಿಸಿದರು. ಕೆಕೆಆರ್ ಪ್ರಮುಖ 3 ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು.

ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಹೋರಾಟದಿಂದ ಕೆಕೆಆರ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇವರಿಬ್ಬರ ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಆಸೆಗೆ ಅಡ್ಡಿಯಾಯಿತು. ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಂತಿಮ 18 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 13 ರನ್ ಅವಶ್ಯಕತೆ ಇತ್ತು. ಈ ವೇಳೆ ಅನಗತ್ಯ ರನ್ ಕದಿಯಲು ಹೋದ ರಿಂಕು ಸಿಂಗ್ ರನೌಟ್‌ಗೆ ಬಲಿಯಾದರು. ರಿಂಕು ಸಿಂಗ್ 54 ರನ್ ಕಾಣಿಕೆ ನೀಡಿದರು. 

ನಿತೀಶ್ ರಾಣಾ ಹಾಗೂ ಆ್ಯಂಡ್ರೆ ರಸೆಲ್ ಹೋರಾಟ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟಿತು. 18.3 ಎಸೆತದಲ್ಲಿ ಕೆಕೆಆರ್ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ನಿತೀಶ್ ಅಜೇಯ 57 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ ಇದೀಗ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಸಿಎಸ್‌ಕೆ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸಲು ವಿಫಲವಾಯಿತು. ರುತುರಾಜ್ ಗಾಯಕ್ವಾಡ್ 17 ರನ್ ಸಿಡಿಸಿ ಔಟಾದರು. ಡೆವೋನ್ ಕಾನ್ವೇ 30 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ 16 ರನ್ ಸಿಡಿಸಿ ನಿರ್ಗಮಿಸಿದರು. ಸಿಎಸ್‌ಕೆ ಟಾಪ್ ಆರ್ಡರ್ ಅಲ್ಪ ಕಾಣಿಕೆ ನೀಡಿದರೂ ರನ್‌ರೇಟ್ ಟಿ20 ಶೈಲಿಯಲ್ಲಿ ಇರಲಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ರನ್‌ರೇಟ್ ಇಲ್ಲದೆ ಪರದಾಡಿತು. 

ಅಂಬಟಿ ರಾಯುಡು ಕೇವಲ 4 ರನ್ ಸಿಡಿಸಿ ಔಟಾದರು. ಮೊಯಿನ್ ಆಲಿ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಜೊತೆಯಾಟದಿದ ಚೇತರಿಸಿಕೊಂಡಿತು. ಆದರೆ ಕಳಪೆ ರನ್‌ರೇಟ್‌ನಿಂದ ಚೆನ್ನೈ ಬೃಹತ್ ಮೊತ್ತ ಸಿಡಿಸಲು ವಿಫಲವಾಯಿತು. ಜಡೇಜಾ 24 ಎಸೆತದಲ್ಲಿ 20 ರನ್ ಸಿಡಿಸಿದರು. ಶಿವಂ ದುಬೆ ಅಜೇಯ 48 ರನ್ ಸಿಡಿಸಿದರು. ಅಂತಿಮ 3 ಎಸೆತ ಎದುರಿಸಿದ ಧೋನಿ 2 ರನ್ ಸಿಡಿಸಿದರು. ಈ ಮೂಲಕ ಧೋನಿ 6 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿತು.